ಬೇಲಿ ಹಾಕುವ ವಿಚಾರ – ಕೊಡಲಿಯಿಂದ ಹಲ್ಲೆ
ಸೊರಬ : ತಾಲೂಕಿನ ಆನವಟ್ಟಿ ಗ್ರಾಮದ ತಿಮ್ಮಾಪುರ ಗ್ರಾಮದಲ್ಲಿ ಖಾಲಿ ನಿವೇಶನಕ್ಕೆ ಬೇಲಿ ಹಾಕುವ ವಿಚಾರದಲ್ಲಿ ಮಾರಾಮಾರಿ ನಡೆದ ಬಗ್ಗೆ ವರದಿಯಾಗಿದೆ.
ಅಣ್ಣಪ್ಪ (58) ಎನ್ನುವವರ ಪಕ್ಕದ ಮನೆಯ ರಿಜ್ವಾನ್ ಎಂಬಾತ ಕೊಡಲಿಯಿಂದ ಹಲ್ಲೆ ನಡೆಸಿ ಅಣ್ಣಪ್ಪ ದಂಪತಿಗಳಿಗೆ ಅವಾಚ್ಯ ಶಬ್ದ ಮತ್ತು ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.
ರಿಜ್ವಾನ್, ಸಹೋದರ ಕರೀಮುಲ್ಲಾ, ರುಕ್ಸನಾ ಮತ್ತು ಶಬಾನಾ ವಿರುದ್ಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಣ್ಣಪ್ಪನವರ ಮನೆಯ ಪಕ್ಕದ ಜಾಗ ತಮ್ಮದಾಗಿದ್ದು ಅದನ್ನು ಸ್ವಚ್ಛಗೊಳಿಸಿ ಬೇಲಿ ಹಾಕಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬೇಲಿ ಹಾಕಿರುವ ಜಾಗದಲ್ಲಿ ಏಕಾಏಕಿ ನುಗ್ಗಿದ ರಿಜ್ವಾನ್ ಮತ್ತು ಸಹೋದರ ಕರೀಮುಲ್ಲಾ ಅವರು ಬೇಲಿ ಕಿತ್ತು ಹಾಕಿದ್ದಾರೆ. ಈ ವಿಚಾರವಾಗಿ ಅಣ್ಣಪ್ಪ ಓಡಿ ಬಂದು ಬೇಲಿ ಯಾಕೆ ಕೀಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ಇಬ್ಬರೂ ಸಹೋದರರು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
ಕರೀಮುಲ್ಲಾ ಅಣ್ಣಪ್ಪ ಅವರನ್ನು ಹಿಡಿದುಕೊಂಡಿದ್ದರೆ ರಿಜ್ವಾನ್ ಕೊಡಲಿಯಿಂದ ಎದೆ ಭಾಗಕ್ಕೆ ಹೊಡೆದಿದ್ದು ಸಹೋದರಿಯರಾದ ರುಕ್ಸಾನಾ ಮತ್ತು ಶಬಾನಾ ಅಣ್ಣಪ್ಪನ ಪತ್ನಿಗೆ ಬೈದಿರುವುದಾಗಿ ದೂರಲಾಗಿದೆ.
ಸಹೋದರರಿಂದ ಗಾಯಗೊಂಡ ಅಣ್ಣಪ್ಪ ಆನವಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ದೂರು ನೀಡಿದ್ದಾರೆ.