Headlines

ಹೊಸನಗರ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದ ಹಾವಳಿ – ಕಣ್ಮುಚ್ಚಿ ಕೈ ಬಿಸಿ ಮಾಡಿಕೊಂಡು ಕುಳಿತಿದೆ ಅಬಕಾರಿ ಇಲಾಖೆ

ಹೊಸನಗರ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದ ಹಾವಳಿ – ಕಣ್ಮುಚ್ಚಿ ಕೈ ಬಿಸಿ ಮಾಡಿಕೊಂಡು ಕುಳಿತಿದೆ ಅಬಕಾರಿ ಇಲಾಖೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಪಟ್ಟಣದಲ್ಲಿ ಹೊಟೇಲ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಸುತ್ತಿದ್ದರೂ ತಾಲೂಕಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ನಮಗೆ ಬರುವುದು ಬಂದರೆ ಸಾಕು ಊರು ಹಾಳಾಗಿ ಹೋಗಲಿ ಎನ್ನುತ್ತಿರುವ ಹಾಗೆ ಇರುವುದನ್ನು ಕಂಡು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಹೊಸನಗರ ತಾಲೂಕಿನಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟದ ದಂಧೆ ಕಣ್ಣಿಗೆ ಕಾಣಿಸುತ್ತಿದ್ದರೂ ತಮಗೆ ಏನೂ ಗೊತ್ತಿಲ್ಲದಂತೆ ತಾಲೂಕಿನ ಅಬಕಾರಿ ಅಧಿಕಾರಿಗಳು ನಿದ್ರೆಗೆ ಜಾರಿದಂತೆ ನಟಿಸಿ ಜೇಬು ತುಂಬಿಸಿಕೊಳ್ಳುತಿದ್ದಾರೆ. ಇವರ ಈ ನಿರ್ಲಕ್ಷ್ಯತನವು ಗ್ರಾಮೀಣ ಭಾಗದ ಅನೇಕ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿವೆ. ಕುಡಿತದ ಚಟಕ್ಕೆ ಬೀಳುತ್ತಿರುವ ಯುವ ಜನಾಂಗ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವ ದುರಂತ ಚಿತ್ರಣಗಳು ಕಂಡುಬರುತ್ತಿವೆ. ಇಷ್ಟಾದರೂ ಲಜ್ಜೆಗೆಟ್ಟ ಅಧಿಕಾರಿಗಳು ಮಾಮೂಲು ವಸೂಲಾತಿಯಲ್ಲಿಯೇ ನಿರತರಾಗಿ ಹಳ್ಳಿಗಳ ನೆಮ್ಮದಿ ಹಾಳು ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ತಾಲೂಕಿನಲ್ಲಿರುವ ಎಲ್ಲಾ ಅಕ್ರಮ ಮದ್ಯದ ಅಂಗಡಿಗಳಲ್ಲಿ ತಿಂಗಳಿಗೆ ಇಂತಿಷ್ಟು ಎಂದು ಮಾಮೂಲಿ ನಿಗದಿಯಾಗಿದ್ದು ಅದನ್ನು ವಸೂಲಿ ಮಾಡಲು ಖುದ್ದು ತಾಲೂಕಿನ ಪ್ರಮುಖ ಅಬಕಾರಿ ಅಧಿಕಾರಿಯೇ ಹೋಗುತ್ತಾರೆ ಎಂದು ಸಾರ್ವಜನಿಕರು ಆಡಿಕೊಳ್ಳುತಿದ್ದಾರೆ. 

ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ರೀತಿಯ ಅಂಗಡಿಗಳು ತೆರೆಯಲ್ಪಟ್ಟಿವೆ. ಕಿರಾಣಿ ಅಂಗಡಿಗಳಿಂದ ಹಿಡಿದು ಬೀಡಿ ಬೆಂಕಿಪೊಟ್ಟಣ ಮಾರುವ ಶೆಡ್‍ಗಳ ತನಕ ಅಂಗಡಿಗಳು ತಲೆಎತ್ತಿವೆ. ಇನ್ನು ಕೆಲವು ಕಡೆ ಮನೆಗಳೇ ಹೋಟೆಲ್‍ಗಳಾಗಿವೆ. ಇಂತಹ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿ ನಡೆಯುತ್ತಿದೆ. ಆ ಊರಿನ ಅಷ್ಟೆ ಅಲ್ಲ, ಸುತ್ತಮುತ್ತಲಿನ ಜನರಿಗೂ ಇದರ ಅರಿವಿದೆ. ಹಿಂದೆಲ್ಲ ರಾತ್ರಿವೇಳೆ ಮಾತ್ರವೆ ಇಂತಹ ಅಂಗಡಿಗಳಿಗೆ ಕದ್ದು ಮುಚ್ಚಿ ನುಗ್ಗಿ ಹೋಗಿ ಬರುತ್ತಿದ್ದವರು ಈಗ ದಿನದ ವ್ಯವಹಾರ ರೂಢಿಸಿಕೊಂಡಿದ್ದಾರೆ.

ಅಬಕಾರಿ ಇಲಾಖೆಯವರಿಗೆ ಹಳ್ಳಿಗಳಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟದ ಚಟುವಟಿಕೆಗಳು ಗೊತ್ತಿಲ್ಲವೆಂದಲ್ಲ. ಎಲ್ಲವೂ ತಮ್ಮ ಮೂಗಿನಡಿಯಲ್ಲಿಯೇ ನಡೆಯುತ್ತಿವೆ. ಆದರೆ ಈ ಅಕ್ರಮ ದಂಧೆಗಳಿಗೆ ಅವರ ಕುಮ್ಮಕ್ಕೂ ಮತ್ತು ಸಹಕಾರ ಇರುವುದರಿಂದ ಎಲ್ಲವೂ ರಾಜಾರೋಷವಾಗಿ ನಡೆದು ಹೋಗುತ್ತಿದೆ. ಯಾರಾದರೂ ದೂರಿದರೆ ಮಾತ್ರ ನೆಪಮಾತ್ರಕ್ಕೆ ದಾಳಿ ಮಾಡುವ ಪ್ರಸಂಗಗಳು ಅಲ್ಲಲ್ಲಿ ಕಂಡುಬರುತ್ತಿವೆ.

ಇತ್ತೀಚೆಗೆ ತಾಲೂಕಿನ ಒಂದೆರಡು ಕಡೆ ಅಬಕಾರಿ ದಾಳಿ ನಡೆದಿರುವುದು ವರದಿಯಾಗಿದೆ. ಇದರ ಹಿಂದೆಯೂ ಕೆಲವು ತಂತ್ರಗಾರಿಕೆಗಳಿವೆ. ಒಂದು ಕಡೆ ದಾಳಿ ಮಾಡುವ ಮೂಲಕ ಇತರರಿಗೆ ಎಚ್ಚರಿಕೆ ಕೊಡುವುದು, ನಮ್ಮನ್ನು ನೋಡಿಕೊಳ್ಳಿ, ನಮ್ಮ ಬೆಲೆಯೇರಿಕೆಯಾಗಿದೆ ಎಂಬ ಸಂದೇಶ ರವಾನಿಸುವುದು ಇದರ ಹಿಂದಿನ ತಂತ್ರಗಾರಿಕೆ…

ಅಕ್ರಮ ಮದ್ಯದ ಮೇಲೆ ನಡೆಸುವ ದಾಳಿಗಳು ಪ್ರಾಮಾಣಿಕವಾಗಿ ಇದ್ದರೆ ಇಷ್ಟೊತ್ತಿಗಾಗಲೇ ಅದೆಷ್ಟೋ ಅಕ್ರಮ ಮದ್ಯದಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸಬಹುದು ಆದರೆ ಇವರ ಲಂಚದ ದಾಹಕ್ಕೆ ಗ್ರಾಮೀಣ ಭಾಗದ ಕುಟುಂಬಗಳು ಬೀದಿಗೆ ಬರುತ್ತಿದೆ. ಲಂಚಬಾಕ ಅಬಕಾರಿ ಅಧಿಕಾರಿಗಳು ಕಾನೂನಿನ ಕಣ್ಣಿಗೆ ಮಣ್ಣೇರಚಬಹುದು ಆದರೆ ಆ ಬಡ ಕುಟುಂಬದ ಮಕ್ಕಳ ಶಾಪ ತಟ್ಟದೇ ಇರಲಾರದು.

✒  ರಫ಼ಿ ರಿಪ್ಪನ್‌ಪೇಟೆ

One thought on “ಹೊಸನಗರ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದ ಹಾವಳಿ – ಕಣ್ಮುಚ್ಚಿ ಕೈ ಬಿಸಿ ಮಾಡಿಕೊಂಡು ಕುಳಿತಿದೆ ಅಬಕಾರಿ ಇಲಾಖೆ

  1. ಬಾಳೂರು ( ಬಟ್ಟೆಮಲ್ಲಪ ರೋಡ್ ಅಲ್ಲಿ )
    ಹಾಲುಗುಡ್ಡೆ ( ಚಂದ್ರಣ್ಣ ಎನ್ನುವವರ ಅಂಗಡೀಲಿ )
    ಹಾಲುಗುಡ್ಡೆ ಲೀ ಮತ್ತೊಂದು ಅಂಗಡೀಲಿ..
    ಆನೆಕೆರೆ ಬಳಿ , ಗಿರೀಶ್ ಎನ್ನುವವರ ಮನೆಯಲ್ಲಿ
    ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಾರೆ , ಯಾವ ಪೊಲೀಸ್ ಅಧಿಕಾರಿಯೂ ಇದರ ಮೇಲೆ action ತಗೊಂಡಿಲ್ಲ…
    ಒಂದಿಷ್ಟು ದಂಡ ಅಥವಾ ಮಾಮೂಲಿ ತಗೊಂಡು ಹಾಗೆ ಸುಮ್ಮನಾಗಿ ಬಿಡುತ್ತಾರೆ.. ಇದರಿಂದ ಎಷ್ಟೋ ಸಂಸಾರ ಹಾಳಾಗಿ ಹೋಗಿದೆ 😢
    ನಾನು ಎಷ್ಟೋ ಬಾರಿ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಕೂಡ ಯಾವುದೇ ಪ್ರಯೋಜನ ಆಗಲಿಲ್ಲ…
    ಈ ವ್ಯವಸ್ಥೆ ಸರಿ ಆಗಲು ಇನ್ನ್ಯಾವ ರೀತಿಯ ಅಧಿಕಾರಿಗಳು ಬರಬೇಕೋ ? ಬಂದರೂ ಕೂಡ ಅವರ್ಯಾವ ರೀತಿ ಕೆಲ್ಸಾ ಮಾಡ್ತಾರೋ ?

Leave a Reply

Your email address will not be published. Required fields are marked *