ಬಿಡಾಡಿ ಜಾನುವಾರುಗಳಿಗೆ ರೇಡಿಯಂ ಬೆಲ್ಟ್ ಅಳವಡಿಸಿದ ರಿಪ್ಪನ್‌ಪೇಟೆ ಪೊಲೀಸರು
ರಿಪ್ಪನ್‌ಪೇಟೆ : ರಾತ್ರಿ ವೇಳೆ ಅಪಘಾತದಲ್ಲಿ ಮೂಕ ಜಾನುವಾರುಗಳು ಗಾಯಗೊಳ್ಳುವುದು, ಕೆಲವೊಮ್ಮೆ ಸಾಯುವುದು, ವಾಹನ ಸವಾರರು ಸಹ ತೊಂದರೆಗೀಡಾಗುವುದು, ವಾಹನ ಜಖಂಗೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಬಿಡಾಡಿ ಜಾನುವಾರುಗಳ ಕೊರಳಿಗೆ ರೇಡಿಯಂ ಬೆಲ್ಟ್ ಕಟ್ಟುವ ಕೆಲಸವನ್ನು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದಲ್ಲಿ ಪ್ರಾರಂಭಿಸಲಾಗಿದೆ.
ಈ ಮೂಲಕ ರಾತ್ರಿ ವೇಳೆ ವಾಹನ ಸವಾರರಿಗೆ ಕತ್ತಲೆಯಲ್ಲಿದ್ದರು ಜಾನುವಾರುಗಳು ಕಾಣುವಂತೆ ಮಾಡಲಾಗುತ್ತಿದ್ದು,ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಬಿಡಾಡಿ ದನಗಳು ರಾತ್ರಿ ವೇಳೆಯಲ್ಲಿ ರಸ್ತೆಗಳ ಮೇಲೆಯೇ ಮಲಗಿರುತ್ತವೆ. ಪಟ್ಟಣ, ನಗರ, ಹೆದ್ದಾರಿ ಸೇರಿದಂತೆ ಎಲ್ಲೆಂದರಲ್ಲಿ ಬಿಡಾಡಿ ಜಾನುವಾರುಗಳ ಹಾವಳಿ ಹೆಚ್ಚಾಗಿದೆ. ಕತ್ತಲೆಯಲ್ಲಿ ಇವು ಗಮನಕ್ಕೆ ಬಾರದೇ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತವೆ.ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ.
ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯ ನಿರ್ವಹಿಸುವ ಮೂಲಕ ಜನಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಿರುವ ಪಿಎಸ್‌ಐ ಪ್ರವೀಣ್ ಎಸ್ ಪಿ ಬಿಡಾಡಿ ಜಾನುವಾರುಗಳಿಂದ ರಾತ್ರಿ ವೇಳೆ ಸಂಭವಿಸುವ ಅನಾಹುತವನ್ನು ತಪ್ಪಿಸುವ ಕೆಲಸಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ರಾತ್ರಿ ವೇಳೆಯಲ್ಲಾಗುವ ಅಪಘಾತದಲ್ಲಿ ಮೂಕ ಪ್ರಾಣಿಗಳು ಸಾಯುತ್ತವೆ. ಜತೆಗೆ ವಾಹನ ಸವಾರರು ಸಾಕಷ್ಟುನೋವು ಅನುಭವಿಸುತ್ತಾರೆ. ಹೀಗಾಗಿ ರಾತ್ರಿ ವೇಳೆ ರಸ್ತೆಯ ಮೇಲೆ ಜಾನುವಾರು ಇರುವುದು ಗೋಚರಿಸಲೆಂದು ರೇಡಿಯಂ ಬೆಲ್ಟ್ ನ್ನು ಅವುಗಳ ಕೊರಳಿಗೆ ಹಾಕುವ ಕೆಲಸವನ್ನು ಮಾಡುತಿದ್ದೇವೆ ಎನ್ನುತ್ತಾರೆ ಪಿಎಸ್‌ಐ ಪ್ರವೀಣ್ ಎಸ್ ಪಿ..
ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜಪ್ಪ ASI , ಉಮೇಶ್ ,ಸಂತೋಷ್ ಕೊರವರ , ಚನ್ನಪ್ಪ , ಪರಮೇಶ್ವರಪ್ಪ ಹಾಗೂ ಮಧುಸೂಧನ್ ಇದ್ದರು…
ರಿಪ್ಪನ್‌ಪೇಟೆಯ ಬಸ್ ನಿಲ್ದಾಣ,ಸಂತೆ ಮಾರುಕಟ್ಟೆ ಪ್ರದೇಶ ಮತ್ತು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಓಡಾಡುವ ದನಗಳಿಂದ ತೀವ್ರ ತೊಂದರೆಯಾಗಿದೆ. ಬಿಡಾಡಿ ದನ ಎಂದು ಕಟ್ಟಿ ಹಾಕಿದರೆ ಬಿಡಿಸಿಕೊಂಡು ಹೋಗಲು ಬರುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿರುವ ಎಲ್ಲವೂ ಬಿಡಾಡಿ ದನಗಳಲ್ಲ. ಆದ್ದರಿಂದ ಸ್ಥಳೀಯ ಆಡಳಿತ ಅಸಲಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.