ದಾರಿಹೋಕನನ್ನು ವಂಚಿಸಿ ಉಂಗುರ ದೋಚಿದ ಬೈಕ್ ಸವಾರರು
ಶಿವಮೊಗ್ಗ: ದಾರಿಯಲ್ಲಿ ಸಿಗುವ ವ್ಯಕ್ತಿಗಳು ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಹೇಗೆಲ್ಲಾ ಯಾಮಾರಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಎನ್ನುವಂತಹ ಪ್ರಕರಣವೊಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ವೀರಶೈವ ರುದ್ರಭೂಮಿಯ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮಾತನಾಡಿಸಿದ್ದಾರೆ. ಕರುಬರಪಾಳ್ಯದ ದುರ್ಗಮ್ಮನ ದೇವಸ್ಥಾನದ ಹುಂಡಿಗೆ ಹಣ ಹಾಕಬೇಕು. ಆದರೆ ದೇವಸ್ಥಾನದ ಬಾಗಿಲು ಹಾಕಿದೆ. ಆ ದುಡ್ಡನ್ನ ನಿಮಗೆ ಕೊಡುತ್ತೇವೆ. ಸಂಜೆ ನೀವೆ ಹಾಕಬಹುದಾ ಎಂದು ಕೇಳಿದ್ದಾರೆ. ಇದಕ್ಕೆ ಸಂತ್ರಸ್ತ ವ್ಯಕ್ತಿ ಸರಿ ಎಂದಿದ್ದಾರೆ.
ಈ ವೇಳೆ ಸ್ಕೂಟರ್‌ನಲ್ಲಿದ್ದ ಇನ್ನೊಬ್ಬ ವ್ಯಕ್ತಿಯು ಪೂಜೆ ಸಾಮಾಗ್ರಿಗೆ ನವರತ್ನ ಇರುವ ಉಂಗುರವನ್ನ ಮುಟ್ಟಿಸಿ ಪೂಜೆಗೆ ಕೊಡಬೇಕು ಎಂದು ಹೇಳಿ ಸಂತ್ರಸ್ತರ ಕೈಯಲ್ಲಿದ್ದ ಉಂಗುರವನ್ನ ಪಡೆದುಕೊಂಡು ಪೂಜೆ ಸಾಮಗ್ರಿ ಇದ್ದ ಕವರ್‌ಗೆ ಮುಟ್ಟಿಸಿದ್ದಾನೆ. ಈ ವೇಳೆ ಅದೇ ಕವರ್‌ನೊಳಗೆ ಸಂತ್ರಸ್ತ ವ್ಯಕ್ತಿಯ ಉಂಗುರವನ್ಹಾಕಿದಂತೆ ಮಾಡಿ ಅವರ ಕೈಗೆ ಕವರ್ ಕೊಟ್ಟು ಇಬ್ಬರು ಅಲ್ಲಿಂದ ತೆರಳಿದ್ದಾರೆ.
ಇತ್ತ ಸಂತ್ರಸ್ತರು ಮನೆಗೆ ಬಂದು ಪೂಜೆ ಕವರ್‌ನಲ್ಲಿದ್ದ ತಮ್ಮ ಉಂಗುರ ಹುಡುಕಿದಾಗ ಅಲ್ಲಿ ಕಲ್ಲೊಂದು ಇರುವುದು ಕಾಣಿಸಿದೆ. ಆ ಬಳಿಕ ಅವರಿಗೆ ಸ್ಕೂಟರ್‌ನಲ್ಲಿದ್ದವರು ತಮ್ಮನ್ನ ಯಾಮಾರಿಸಿ ಉಂಗುರ ಕದ್ದು, ಅದರ ಬದಲಿಗೆ ಕಲ್ಲಿಟ್ಟು ಮೋಸ ಮಾಡಿರುವುದು ಗೊತ್ತಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.