ಜಮೀನಿಗೆ ತೆರಳುವ ವಿಚಾರದಲ್ಲಿ ಗಲಾಟೆ – ಯುವಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ
ಜಮೀನಿಗೆ ತೆರಳುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಯುವಕನೋರ್ವನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ (Murder Attempt) ನಡೆಸಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗುಬ್ಬಿಗ (ಅಡ್ಡೆರಿ ) ಗ್ರಾಮದಲ್ಲಿ ನಡೆದಿದೆ.
ಅಡ್ಡೇರಿ ಗ್ರಾಮದ ಆದರ್ಶ(22) ಎಂಬ ಯುವಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ.ಈ ಗಲಾಟೆಯಲ್ಲಿ ಗಾಯಾಳು ಯುವಕನ ತಂದೆ ಬಸವರಾಜ್ ಹಾಗೂ ತಾಯಿ ಭವಾನಿ ರವರಿಗೂ ಗಾಯಗಳಾಗಿದ್ದು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಆರೋಪಿಗಳಾದ ಅಡ್ಡೆರಿ ಗ್ರಾಮದ ಅಖಿಲೇಶ್ ಹಾಗೂ ಸಂದೇಶ್ ತಲೆಮರೆಸಿಕೊಂಡಿದ್ದು ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.
ನಡೆದಿದ್ದೇನು..!!??
ದಿನಾಂಕ 22/11/2024 ರಂದು ಬೆಳಿಗ್ಗೆ ಅಡಿಕೆಯನ್ನು ತೋಟದಿಂದ ಗಾಯಾಳು ಆದರ್ಶ್ ತಂದೆ ಬಸವರಾಜ್ ಮತ್ತು ತಾಯಿ ಭವಾನಿ ಹೊರುತ್ತಿದ್ದಾಗ ಅಡ್ಡೇರಿ ಗ್ರಾಮದ ಮಂಜಪ್ಪರವರ ಮಗನಾದ ಸಂದೇಶನು ಬಂದವನೆ ಬಸವರಾಜ್ ರನ್ನು ಅಡ್ಡಗಟ್ಟಿ ತಡೆದು ನಿಲಿಸಿ ನೀವು ಈ ದಾರಿಯಲ್ಲಿ ಓಡಾಡುವಂತಿಲ್ಲ. ಈ ದಾರಿ ನಮಗೆ ಸೇರಿದ್ದು ಎಂದು ಹೇಳಿದ್ದು ಅವರ ದೊಡ್ಡಪ್ಪನ ಮಗನಾದ ಅಖಿಲೇಶ್ ಗೆ ಫೋನ್ ಮಾಡಿ ಕರೆಯಿಸಿದ್ದಾನೆ. ಸ್ಥಳಕ್ಕೆ ಬಂದ ಅಖಿಲೇಶ್ ಅವಾಚ್ಯ ಪದಗಳಿಂದ ಬೈಯುತ್ತಾ ಇಲ್ಲಿ ನೀವು ಯಾರು ಓಡಾಡಬಾರದು, ಇದು ನಮಗೆ ಸೇರಿದ ದಾರಿ ಎಂದು ಗಲಾಟೆ ಮಾಡಿದನು, ಆಗ ಬಸವರಾಜ್ ಈ ದಾರಿ ನಮಗೂ ಸೇರಿದ್ದು ಎಂದು ಹೇಳುತಿದ್ದಂತೆಯೇ, ಅಖಿಲೇಶನು ಬಸವರಾಜ್ ನ್ನು ಹಿಡಿದು ದೂಡಿ ಕೆಡವಿದ್ದಾನೆ.
ಆದರ್ಶ್ ಅವರ ತಾಯಿಯವರು ಬಸವರಾಜ್ ಎತ್ತಲು ಹೋದಾಗ, ಅಖಿಲೇಶನು ಸಂದೇಶನ ಕೈಯಲಿದ್ದ ಕತ್ತಿಯನ್ನು ಕಸಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಆದರ್ಶನ ಕುತ್ತಿಗೆಗೆ ಹೊಡೆಯಲು ಬೀಸಿದಾಗ ಆದರ್ಶನು ತಪ್ಪಿಸಿಕೊಂಡಾಗ ಕತ್ತಿಯ ಏಟು ಬಲಭಾಗದ ಭುಜಕ್ಕೆ, ಬಿದ್ದು ಗಾಯವಾಗಿ ರಕ್ತ ಸುರಿಯುತಿದ್ದಾಗ, ಬಿಡಿಸಲು ಬಂದ ತಾಯಿಯ ಮೇಲೂ ಹಲ್ಲೆಗೈದಿದ್ದಾರೆ.
ನಂತರದಲ್ಲಿ ಅವಾಚ್ಯ ಪದಗಳಿಂದ ಬೈಯುತ್ತಾ ನೀವು ಮತ್ತೆ ಈ ದಾರಿಯಲಿ ಓಡಾಡಲು ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಕೊಲೆಮಾಡುತ್ತೇವೆ ಎಂದು ಬೆಧರಿಕೆ ಹಾಕಿ ಹೋಗಿದ್ದಾರೆ.
ಗಾಯಾಳುಗಳು ಕೂಡಲೇ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಹಾಗೂ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.