ಎಡಿಜಿಪಿ ಚಂದ್ರಶೇಖರವರನ್ನು ಸೇವೆಯಿಂದ ವಜಾಗೊಳಿಸುವಂತೆ ಹೊಸನಗರ ತಾಲ್ಲೂಕು ಜೆಡಿಎಸ್ ಆಗ್ರಹ
ರಿಪ್ಪನ್‌ಪೇಟೆ : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಕೀಳು ಮಟ್ಟದ ಪದ ಬಳಸಿ ಅವಮಾನ ಮಾಡಿರುವ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ರವರನ್ನು ಸೇವೆಯಿಂದ ವಜಾಗೊಳಿಸುವಂತೆ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಹಾಗೂ ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾದ ಮೊಕದ್ದಮೆಯೊಂದರ ಹಿನ್ನಲೆಯಲ್ಲಿ ಲೋಕಯುಕ್ತ ಎಡಿಜಿಪಿಯಾದ ಚಂದ್ರಶೇಖರವರು ಹೆಚ್.ಡಿ. ಕುಮಾರ ಸ್ವಾಮಿಯವರ ವಿರುದ್ಧ ಕೀಳು ಭಾಷೆಯಲ್ಲಿ ಮಾತನಾಡಿದ್ದು ಜಾತ್ಯಾತೀತ ಜನತಾದಳದ ವತಿಯಿಂದ ಖಂಡಿಸಿ ಸದರಿ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು.
ಸದರಿ ಅಧಿಕಾರಿಯು ಈ ಹಿಂದೆ ಕೆಲಸ ನಿರ್ವಹಿಸಿದ ಎಲ್ಲಾ ಸ್ಥಳಗಳಲ್ಲಿ ಹಾಗೂ ವಿವಿಧ ಹುದ್ದೆಗಳಲ್ಲಿ ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳಿಗೆ ಇರಬೇಕಾದ ಘನತೆ, ಗೌರವಗಳಿಗೆ ವಿರುದ್ಧವಾಗಿ ವರ್ತಿಸಿದ್ದ ಅನೇಕ ಉದಾಹರಣೆಗಳಿವೆ. ಆದ್ದರಿಂದ ಘನವೆತ್ತ ರಾಜ್ಯಪಾಲರು ಸದರಿ ಅಧಿಕಾರಿಯ ಸೇವಾವಿವರಗಳನ್ನು ತರಿಸಿಕೊಂಡು ಕಳಂಕ ಹೊತ್ತ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡುವಂತೆ ಹಾಗೂ ಇವರ ವಿರುದ್ಧ ಇರುವ ಎಲ್ಲಾ ಆರೋಪಗಳ ತನಿಖೆ ಮಾಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾದ ಜಿ.ಎಸ್. ವರದರಾಜ್ ಇದ್ದರು.