WhatsApp Channel Join Now
Telegram Channel Join Now

BENGALURU, 15 ಅಕ್ಟೋಬರ್ :  ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿ ಸಮೀಪದ ಯಡಿಯೂರಪ್ಪ ನಗರದ ಮನೆಯೊಂದರಲ್ಲಿ ಇಬ್ಬರು ಪುಟ್ಟ ಮಕ್ಕಳು ಹಾಗೂ ಮಕ್ಕಳ ತಂದೆ-ತಾಯಿ ಸೇರಿ ನಾಲ್ವರ ಶವಗಳು ಸೋಮವಾರ ಪತ್ತೆಯಾಗಿವೆ.

ಪತಿ ಅವಿನಾಶ್ (33), ಪತ್ನಿ ಮಮತಾ(30), ಮಕ್ಕಳಾದ ಅಧೀಯ(5) ಮತ್ತು ಅನಯಾ (3) ಮೃತರು.

‘ಕಲಬುರಗಿಯ ಕಮಲಾ‍‍ಪುರದ ತಾಂಡಾದ ದಂಪತಿ ಆರು ವರ್ಷಗಳಿಂದ ಯಡಿಯೂರಪ್ಪ ನಗರದಲ್ಲಿ ವಾಸವಾಗಿದ್ದರು. ಅವಿನಾಶ್ ಅವರು ಕ್ಯಾಬ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮಮತಾ ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಅವಿನಾಶ್ ಅವರ ಸಹೋದರ ಸೋಮವಾರ ಬೆಳಿಗ್ಗೆ ಮನೆಗೆ ಬಂದಾಗ ಯಾರೂ ಮನೆಯ ಬಾಗಿಲು ತೆರೆಯಲಿಲ್ಲ. ಬಾಗಿಲು ಒಡೆದು ಪರಿಶೀಲಿಸಿದಾಗ ನಾಲ್ವರ ಶವ ಪತ್ತೆಯಾಗಿವೆ. ಅವಿನಾಶ್ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದೆ. ಉಳಿದವರು ಸಾವು ಹೇಗಾಯಿತು ಎಂಬುದು ಇನ್ನೂ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಸಿ.ಕೆ.ಬಾಬಾ ಮಾಹಿತಿ ನೀಡಿದರು.

‘ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅವಿನಾಶ್‌ ಅವರ ಸಹೋದರರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಅವಿನಾಶ್‌ ಅವರು ಭಾನುವಾರ ಕ್ಯಾಬ್‌ ಚಾಲನೆಗೆ ತೆರಳಿದ್ದರು. ವಾಪಸ್ ಬಂದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ’ ಎಂದೂ ತಿಳಿಸಿದರು.

ಮಕ್ಕಳ ಕತ್ತು ಹಿಸುಕಿ ಕೊಲೆ?:

ತಾಯಿಯೇ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದು ನಂತರ ಆಕೆಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

ಹಲವು ಬಾರಿ ಕರೆ ಮಾಡಿದ್ದ ಪತಿ: ‘ಭಾನುವಾರ ಕ್ಯಾಬ್‌ ಚಾಲನೆಗೆ ತೆರಳಿದ್ದ ಅವಿನಾಶ್‌ ಅವರು ಪತ್ನಿಗೆ ಹಲವು ಬಾರಿ ಮಾಡಿದ್ದರು. ಎಷ್ಟು ಬಾರಿ ಕರೆ ಮಾಡಿದರೂ ಆಕೆ ಕರೆಯನ್ನು ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಅವಿನಾಶ್ ಅವರು ಪಕ್ಕದ ಮನೆಯವರಿಗೆ ಕರೆ ಮಾಡಿ ಪರಿಶೀಲಿಸುವಂತೆ ತಿಳಿಸಿದ್ದರು. ಅವರು ಮನೆ ಬಳಿಗೆ ತೆರಳಿ ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ. ನಂತರ, ಅವಿನಾಶ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣವೇ ಮನೆಗೆ ಬಂದ ಅವಿನಾಶ್ ಅವರು ಪತ್ನಿ ಹಾಗೂ ಮಕ್ಕಳ ಸ್ಥಿತಿಕಂಡು, ಪತ್ನಿಯ ಮೃತದೇಹವನ್ನು ಕೆಳಕ್ಕಿಳಿಸಿ ಅದೇ ಹಗ್ಗದಿಂದ ತಾವೂ ನೇಣಿಗೆ ಶರಣಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

ದಂಪತಿ ಮಧ್ಯೆ ಕೌಟುಂಬಿಕ ಕಲಹ ಇತ್ತು. ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣ?

‘ಅವಿನಾಶ್ ಅವರು ತನ್ನ ಮಾವನಿಗೆ ಕಳೆದ ವಾರ ಕರೆ ಮಾಡಿದ್ದರು. ಕ್ರೆಡಿಟ್ ಕಾರ್ಡ್ಗೆ ಹಣ ತುಂಬಬೇಕು ಎಂದು ಹೇಳಿದ್ದರು. ಅದಕ್ಕೆ ಅವರು ಸದ್ಯ ನನ್ನ ಬಳಿ ಹಣ ಇಲ್ಲ ಮುಂದೆ ನೋಡುತ್ತೇನೆ ಎಂದು ಹೇಳಿದ್ದರು. ಪತಿಯ ಆರ್ಥಿಕ ಸ್ಥಿತಿಕಂಡು ಮಮತಾ ಅವರು ಮಕ್ಕಳನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *