
ನಕಲಿ ಸಹಿ ಬಳಸಿ ಪೋಡಿ ದುರಸ್ಥಿಗೊಳಿಸಿ ವಂಚನೆ – ಸರ್ಕಾರಿ ಭೂಮಾಪಕ ಸೇರಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲು
ಜಮೀನು ಮಾಲೀಕರ ನಕಲಿ ಸಹಿ ಬಳಸಿ ಪೋಡಿ ದುರಸ್ತಿ ಮಾಡಿರುವ ಆರೋಪದಲ್ಲಿ ಹೊಸನಗರ ತಾಲೂಕ್ ಕಛೇರಿಯ ಭೂ ಮಾಪಕ ಸೇರಿದಂತೆ ನಾಲ್ವರ ಮೇಲೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಳೂರು ಗ್ರಾಮದ ಸರ್ವೆ ನಂ 99/3 ರಲ್ಲಿ 4.13 ಎಕರೆ ಜಮೀನು ದೂರುದಾರ ಹಾಲುಗುಡ್ಡೆ ಗ್ರಾಮ ಸತ್ಯನಾರಾಯಣ ಹಾಗೂ ಸಹೋದರಿಯ ಜಂಟಿ ಖಾತೆಯಲ್ಲಿರುತ್ತದೆ.ಆದರೆ ಗೋಮೇದ ಬಿನ್ ಯಲ್ಲಪ್ಪ ಎಂಬಾತ ತಾಲೂಕು ಭೂಮಾಪಕ ಚಂದ್ರಶೇಖರ್ ಕುಮ್ಮಕ್ಕು ಹಾಗೂ ಪ್ರಚೋದನೆಯಿಂದ ಜಮೀನು ಮಾಲೀಕರ ಗಮನಕ್ಕೆ ತರದೇ ಸರ್ವೆ ಅರ್ಜಿ , ನೋಟೀಸ್ ಹಾಗೂ ಮಹಜರ್ ಗೆ ನಕಲಿ ಸಹಿ ಹಾಕಿ ಪೋರ್ಜರಿ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಮೇದಾ ಬಿನ್ ಯಲ್ಲಪ್ಪ , ಉಮೇಶ್ ಬಿನ್ ಯಲ್ಲಪ , ಯಲ್ಲಪ್ಪ ಬಿನ್ ಮಾರ್ಗಣ್ಣ ಹಾಗೂ ಚಂದ್ರಶೇಖರ್ ಭೂಮಾಪಕರು ತಾಲೂಕ್ ಕಛೇರಿ ಇವರ ಮೇಲೆ 323,504,420,465 ಕಲಂ ಅಡಿಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸಂತ್ರಸ್ಥ ವ್ಯಕ್ತಿಯು ಭೂಮಾಪಕ ಚಂದ್ರಶೇಖರ್ ಬಳಿ ವಿಚಾರಿಸಲು ಹೋದಾಗ ಸದರಿ ದೂ ದಾಖಲೆ ಮತ್ತು ಸರ್ವೆ ಸೈಟ್ ಅನ್ನು ನಾನೇ ಶಾಮೀಲಾಗಿ ಮಾಡಿಕೊಟ್ಟಿರುತ್ತೇನೆ. ನಿಮ್ಮ ಸಹಿಗಳು ನಮಗೆ ಅಗತ್ಯವಿಲ್ಲ, ನಿಮ್ಮ ಸಹಿಗಳನ್ನು ಗೋಮೇದ ಹಾಗೂ ಯಲ್ಲಪ್ಪ ಬಳಿ ಹಾಕಿಸಿಕೊಂಡಿರುತ್ತೇನೆ, ನೀನು ಏನು ಮಾಡಿಕೊಳ್ಳುತ್ತೀಯೋ ಮಾಡಿಕೊ, ಇನ್ನೊಮ್ಮೆ ಕೇಳಲು ಬಂದರೆ ಕೈಕಾಲು ಮುರಿಸುತ್ತೇನೆ ಮತ್ತು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಂದು ದೂರು ದಾಖಲಿಸಿ ಒಳಹಾಕಿಸುತ್ತೇನೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

