ತನ್ನ ಪತ್ನಿಯ ಸಹವಾಸಕ್ಕೆ ಬರಬೇಡ ಎಂದವನ ದೇಹವನ್ನು ಪೀಸ್ ಪೀಸ್ ಮಾಡಿ ನದಿಗೆ ಎಸೆದ ಹಂತಕರು |
ಗಣಪತಿ ಹಬ್ಬದಂದು ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹೆಂಡತಿಯ ಸುದ್ದಿಗೆ ಬರಬೇಡ ಎಂದು ವಾರ್ನಿಂಗ್ ನೀಡಿದ್ದಕ್ಕೆ ಆತನು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕೊಲೆಗೈದು ದೇಹವನ್ನು ಛಿದ್ರ ಛಿದ್ರ ಮಾಡಿ ನದಿಗೆ ಬಿಸಾಕಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ನಾಗೀಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರಕರಣದ ಸಂಬಂಧ ಶಿರಾಳಕೊಪ್ಪ ಪೊಲೀಸರು ಶಿವು ಯಾನೆ ಪ್ರತಾಪ್, ಕಿರಣ್, ಗಣೇಶ್ ಮತ್ತು ನಾಗರಾಜ್ ವಿರುದ್ಧ FIR ಮಾಡಿದ್ದು, THE BHARATIYA NYAYA SANHITA (BNS), 2023 (U/s-103,238,61(2),3(5)) ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಸಾಕ್ಷ್ಯ ನಾಶ, ಕ್ರಿಮಿನಲ್ ಸಂಚು ಆರೋಪಗಳನ್ನ ಹೊರಿಸಲಾಗಿದೆ.
ನಾಗಿಹಳ್ಳಿಯ ಕೃಷ್ಣಪ್ಪ ಮೃತ ದುರ್ಧೈವಿಯಾಗಿದ್ದಾನೆ, ತನ್ನ ಪತಿ ತಡರಾತ್ರಿಯಾದರೂ ಬಾರದ ಹಿನ್ನಲೆಯಲ್ಲಿ ಕೃಷ್ಣಪ್ಪ ಪತ್ನಿ ಭಾಗ್ಯ ಶಿರಾಳಕೊಪ್ಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?
ಕಳೆದ ಸೆಪ್ಟೆಂಬರ್ 7 ರಂದು ಈ ಘಟನೆ ನಡೆದಿದೆ. ಆದರೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಪತ್ತೆ ಪ್ರಕರಣ ದಾಖಲಾದ ಬಳಿಕ. ನಾಗೀಹಳ್ಳಿ ನಿವಾಸಿ 33 ವರ್ಷದ ಕೃಷ್ಣಪ್ಪ ಎಂಬವರ ಪತ್ನಿ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ತಮ್ಮ ಪತಿ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ಕೃಷ್ಣಪ್ಪರ ಪತ್ನಿ ನೀಡಿದ ಸಂಶಯದ ಸುಳಿವನ್ನ ಆಧರಿಸಿ ನಾಗೀಹಳ್ಳಿ ಗ್ರಾಮದ ಕಿರಣ ಎಂಬವನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಆ ಸಂದರ್ಭದಲ್ಲಿ ಕೃಷ್ಣಪ್ಪನ ಕೊಲೆಯ ರಹಸ್ಯ ಬಯಲಾಗುತ್ತದೆ. ಆತ ಹೇಳಿದ ಮಾಹಿತಿ ಆಧರಿಸಿ ಠಾಣೆಯ ಎಸ್‌ಐ ಪ್ರಶಾಂತ್ ಕುಮಾರ್ ಟಿಬಿ ಸುಮುಟೋ ಕೇಸ್ ದಾಖಲಿಸಿದ್ದಾರೆ.
ನಡೆದಿದ್ದು ಏನು?
ದಾಖಲಾಗಿರುವ ಸುಮುಟೋ ಕೇಸ್‌ನ ಎಫ್‌ಐಆರ್ ಪ್ರಕಾರ, ಕೃಷ್ಣಪ್ಪನ ಪತ್ನಿ ಜೊತೆ ಕಿರಣ್ ಎಂಬಾತ ಅನೈತಿಕ ಸಂಬಂಧ ಹೊಂದಿದ್ದ ಎಂದು ದೂರಲಾಗಿದೆ. ಇದೇ ವಿಚಾರದಲ್ಲಿ ಕೃಷ್ಣಪ್ಪ ಕಿರಣನನ್ನ ಕರೆದು ಬೈದು ಎಚ್ಚರಿಕೆ ನೀಡಿದ್ದನಂತೆ. ಈ ಕಾರಣಕ್ಕೆ ಕೃಷ್ಣಪ್ಪನನ್ನೆ ಕೊಲೆ ಮಾಡಲು ನಿರ್ಧರಿಸಿದ ಕಿರಣ ತನ್ನಿಬ್ಬರು ಸ್ನೇಹಿತರಾದ ಪ್ರತಾಪ್ ಹಾಗೂ ಗಣೇಶನ ಸಹಾಯ ಪಡೆದಿದ್ದಾನೆ. ಕೊಲೆಯ ಸ್ಕೆಚ್ ರೂಪಿಸಿಕೊಂಡ ಕಿರಣ, ಕಂದ್ಲಿ ಹಾಗೂ ಕುಡುಗೋಲು ಮತ್ತು ಪ್ಲಾಸ್ಟಿಕ್ ಕೊಪ್ಪೆಗಳನ್ನ ಬೈಕ್‌ವೊಂದರ ಬ್ಯಾಗ್‌ನಲ್ಲಿ ಇರಿಸಿಕೊಂಡು ಕೊಲೆ ಮಾಡಲು ಮುಂದಾಗಿದ್ದಾನೆ.
ತನ್ನ ಸ್ನೇಹಿತರಾದ ಗಣೇಶ ಹಾಗೂ ಪ್ರತಾಪನ ಮೂಲಕ ಕೃಷ್ಣಪ್ಪನಿಗೆ ಬೇರೆ ಊರಿನಲ್ಲಿ ಚೆನ್ನಾಗಿ ಕುಡಿಸಿ ತಡರಾತ್ರಿ ಗ್ರಾಮಕ್ಕೆ ವಾಪಸ್ ಕರೆ ತರುವಂತೆ ಹೇಳಿದ್ದೇನೆ. ಆತನ ಸ್ನೇಹಿತರು ಸಹ ಕಿರಣನ ಪ್ಲಾನಿನಂತೆ ಕೃಷ್ಣಪ್ಪನಿಗೆ ಚೆನ್ನಾಗಿ ಎಣ್ಣೆ ಹೊಡೆಸಿ ನಾಗಿಹಳ್ಳಿ ಕ್ರಾಸ್ ಬಳಿಗೆ ಕರೆತಂದಿದ್ದಾರೆ. ಅಲ್ಲಿಗೆ ಬಂದ ಕಿರಣ ಕೃಷ್ಣಪ್ಪನಿಗೆ ಹೊಡೆದು, ಬೈದು ನಂತರ ಕುಡುಗೋಲಿನಿಂದ ಕುತ್ತಿಗೆಗೆ ಏಟು ಕೊಟ್ಟಿದ್ದಾನೆ. ಆ ಬಳಿಕ ಅಲ್ಲಿಯೇ ಇದ್ದ ಗುಂಡಿಯೊಂದಕ್ಕೆ ಕೃಷ್ಣಪ್ಪನನ್ನ ಶಿಫ್ಟ್ ಮಾಡಿ ಆತನ ಅಂಗಾಂಗಗಳನ್ನ ಕತ್ತರಿಸಿ ಎರಡು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿಕೊಂಡಿದ್ದಾರೆ. ಬಳಿಕ ಗಣೇಶ ಹಾಗೂ ಕಿರಣ ಒಂದು, ಪ್ರತಾಪ ಇನ್ನೊಂದು ಶವದ ಚೀಲವನ್ನ ಹಿಡಿದು ಕೊರಟೆಗೆರೆ , ಚಿಕ್ಕರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್ ಬಳಿಗೆ ತೆರಳಿದ್ದಾರೆ. ಅಲ್ಲಿ ನದಿಗೆ ಎರಡು ಚೀಲದಲ್ಲಿದ್ದ ಕೃಷ್ಣಪ್ಪನ ಅಂಗಾಂಗಗಳನ್ನ ಸುರಿದು ಎಸ್ಕೇಪ್ ಆಗಿದ್ದಾರೆ.
ನಾಪತ್ತೆ ಪ್ರಕರಣವನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದ ಪೊಲೀಸರು ಕಿರಣ್‌ನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯ ಬಯಲಿಗೆ ಬಂದಿದೆ. ಸದ್ಯ ಈ ಸಂಬಂಧ ಕೇಸ್ ದಾಖಲಾಗಿದ್ದು, ಸ್ವತಃ ಪೊಲೀಸರೇ ಸುಮುಟೋ ಕೇಸ್ ದಾಖಲಿಸಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.