ಎರಡೂವರೆ ವರ್ಷದ ಪ್ರೀತಿ – ಮದುವೆಯಾಗೋಣ ಬಾ ಎಂದಳು ಪ್ರಿಯತಮೆ | ಸುಂದರಿಯ ಕಥೆಯನ್ನೆ ಮುಗಿಸಿ ಹೂತಿಟ್ಟ ಪ್ರಿಯಕರ
ಹೆದ್ದಾರಿಪುರದಲ್ಲಿ ನಡೆದ ಸೌಮ್ಯ ಮರ್ಡರ್ ಕಹಾನಿ
ಜೀವನದಲ್ಲಿ ತಾವು ಪ್ರೀತಿಸಿದವರ ಜೊತೆ ಸುಂದರವಾಗಿ ಬದುಕಿ ಬಾಳಿ ತಮ್ಮ ಪ್ರೀತಿಯನ್ನು ವಿರೋಧಿಸಿದವರ ಮುಂದೆ ಸುಂದರವಾಗಿ ಬದುಕಿ ತೋರಿಸಬೇಕೆಂಬ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದ ಅಮಾಯಕ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ , ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಪ್ರಿಯಕರನೇ ಕೊಲೆಗೈದ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ.
ಸೌಮ್ಯಾ ಮತ್ತು ಸೃಜನ್ ಕಳೆದ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ತನ್ನನ್ನು ಮದುವೆಯಾಗುವಂತೆ ಸೌಮ್ಯಾ ಒತ್ತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಸೃಜನ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಸೃಜನ್ ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದ. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸೃಜನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಸೃಜನ್ ಮನವೊಲಿಸಲು ಪ್ರಯತ್ನಿಸಿದ್ದಾನೆ. ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಕರೆದುಕೊಂಡು ಬಂದು ಸಮಾಧಾನದ ಮಾತುಗಳನ್ನಾಡಿದ್ದಾನೆ. ಇದರಿಂದ ಅನುಮಾನಗೊಂಡ ಸೌಮ್ಯ ನನ್ನನ್ನು ದೂರ ಮಾಡುತ್ತಿದ್ದಾನೆ. ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿ ವಾದ ಮಾಡಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ಕೋಪಗೊಂಡ ಸೃಜನ್ ಸೌಮ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಕತ್ತು ಹಿಸುಕಿ ಹಲ್ಲೆ ಮಾಡಿದ ಪರಿಣಾಮ ಯುವತಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.
ಘಟನೆ ವಿವರ:
ತೀರ್ಥಹಳ್ಳಿಯಲ್ಲಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಸೃಜನ್ ಆಗಾಗ ಕೊಪ್ಪಗೆ ಹಣ ವಸೂಲಿಗೆಂದು ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ಓದುತ್ತಿದ್ದ ಸೌಮ್ಯಾಳ ಪರಿಚಯವಾಗಿದೆ. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದೆ. ಆದರೆ ಇಬ್ಬರದ್ದು ಬೇರೆ ಬೇರೆ ಸಮುದಾಯವಾಗಿದ್ದರಿಂದ ಸೃಜನ್ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದಾರೆ.
ಇತ್ತ ಸೌಮ್ಯ ತಮ್ಮ ಪೋಷಕರ ಬಳಿ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಜುಲೈ 2 ರಂದು ಹೊರಟಿದ್ದಾಳೆ. ಅಂತೆಯೇ ತೀರ್ಥಹಳ್ಳಿಗೆ ಬಂದ ಸೌಮ್ಯಾ ತನ್ನ ಪ್ರಿಯತಮನನ್ನು ಭೇಟಿಯಾಗಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾಳೆ. ಈ ವೇಳೆ ಸೃಜನ್, ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದಾನೆ.
ಆದರೆ ಸೃಜನ್ ಮಾತನ್ನು ಕೇಳದ ಸೌಮ್ಯಾ ಮತ್ತೆ ಆತನನ್ನು ಪೀಡಿಸಿದ್ದಾಳೆ. ಹೀಗಾಗಿ ಸೃಜನ್ ಆಕೆಯನ್ನು ಸಮಾಧಾನಪಡಿಸಲೆಂದು ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಕರೆದುಕೊಂಡು ಬಂದಿದ್ದಾನೆ. ತನ್ನನ್ನು ಸೃಜನ್ ಮದುವೆ ಆಗಲ್ಲವೆಂದು ಅನುಮಾನ ವ್ಯಕ್ತಪಡಿಸಿದ್ದಾಳೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರೊಚ್ಚಿಗೆದ್ದ ಸೃಜನ್, ಸೌಮ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಕತ್ತು ಹಿಸುಕಿದ್ದು, ಪರಿಣಾಮ ಆಕೆ ಸ್ಥಳದಲ್ಲೇ ಅಸುನೀಗಿದ್ದಾಳೆ. ಇನ್ನು ಸೌಮ್ಯಾ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಸೃಜನ್ ಗಾಬರಿಯಾಗಿದ್ದಾನೆ. ಅಲ್ಲದೇ ಕೂಡಲೇ ಶವವನ್ನು ಆನಂದಪುರ ಸಮೀಪದ ಮುಂಬಾಳು ಬಳಿ ಹೂತಿಟ್ಟಿದ್ದಾನೆ.
ಇತ್ತ ತೀರ್ಥಹಳ್ಳಿಗೆ ಹೋದ ಸೌಮ್ಯಾ ವಾಪಸ್ ಬರದೇ ಇರುವುದರಿಂದ ಆಕೆಯ ಪೋಷಕರು ಆತಂಕಗೊಂಡು ಕೊಪ್ಪ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಯುವಕನನ್ನು ಹುಡುಕಿಕೊಂಡು ಸಾಗರಕ್ಕೆ ಬಂದಿದ್ದಾರೆ. ಈ ವೇಳೆ ಸೃಜನ್ ಬಣ್ಣ ಬಯಲಾಗಿದೆ.
ಸದ್ಯ ಪ್ರಕರಣ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು ಪಿಎಸ್‌ಐ ಪ್ರವೀಣ್ ಮುಂದಿನ ತನಿಖೆ ಕೈಗೊಂಡಿದ್ದು ಬುಧವಾರ ಬೆಳಿಗ್ಗೆ ಯುವತಿಯ ಮೃತದೇಹವನ್ನು ಹೊರತೆಗೆಯುವ ಸಾಧ್ಯತೆ ಇದೆ.