Ripponpete | ಜುಮ್ಮಾ ಮಸೀದಿ ಮುಂಭಾಗ ತೆರೆಯಲು ಹೊರಟಿದ್ದ ಸಿಎಲ್ 7 ಬಾರ್ ರದ್ದು – ಶಾಸಕರಿಗೆ ಅಭಿನಂದನೆ
ರಿಪ್ಪನ್‌ಪೇಟೆ : ಪಟ್ಟಣದ ಹೊಸನಗರ ರಸ್ತೆಯ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ ಕಟ್ಟಡದಲ್ಲಿ ತೆರೆಯಲು ಹೊರಟಿದ್ದ ಸಿಎಲ್ 7 ಬಾರ್ ಅಂಡ್ ರೆಸ್ಟೋರೆಂಟ್ ಗೆ ವ್ಯಾಪಕ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕ ಬಾಡಿಗೆ ಕರಾರನ್ನು ರದ್ದು ಪಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ಜುಮ್ಮಾ ಮಸೀದಿ ಸಮಿತಿ ವತಿಯಿಂದ ಮಸೀದಿಯ ಮುಂಭಾಗ ಬಾರ್ ತೆರೆಯದಂತೆ ಅವಿರತವಾಗಿ ಶ್ರಮಿಸಿ ಸಮಾಜದೊಂದಿಗೆ ಸಹಕರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜನವರಿ 30 ರಂದು ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿಗಳು ಏಕಾಏಕಿ ಮದ್ಯದಂಗಡಿಗೆ ಪರವಾನಿಗೆ ನೀಡುವ ಹುನ್ನಾರದಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಜುಮ್ಮಾ ಮಸೀದಿಗೂ ರಾಯಲ್ ಕಂಫರ್ಟ್ ಕಟ್ಟಡಕ್ಕೂ ಕೇವಲ 60 ಮೀಟರ್ ಅಂತರದಲ್ಲಿದ್ದರೂ ಅಬಕಾರಿ ನಿಯಮವನ್ನು ಗಾಳಿಗೆ ತೋರಿ ಅವೈಜ್ಞಾನಿಕವಾಗಿ ಅಂಗಡಿ ಆರಂಭಕ್ಕೆ ಹಸಿರು ನಿಶಾನೆ ತೋರಿರುವ ಕ್ರಮವನ್ನು ವಿರೋಧಿಸಿ ಮುಸ್ಲಿಂ ಮಹಿಳೆಯರು ಸೇರಿದಂತೆ ಸರ್ವಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ್ದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ವಿಎಸ್ ರಾಜೀವ್ ಮನವಿಯನ್ನು ಸ್ವೀಕರಿಸಿ ಸ್ಥಳ ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೂ ಪ್ರಾರ್ಥನಾ ಮಂದಿರದ ಬಳಿ ಬಾರ್ ತೆರವಿಗೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದರು.
ನಂತರದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಗೆ ಪಟ್ಟಣದಿಂದ ಸರ್ವಪಕ್ಷಗಳ ನಿಯೋಗ ತೆರಳಿ ಯಾವುದೇ ಕಾರಣಕ್ಕೂ ಪ್ರಾರ್ಥನಾ ಮಂದಿರದ ಸನಿಹದಲ್ಲಿ ಸಿಎಲ್-7 ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿತ್ತು ಹಾಗೇಯೆ ಕೂಡಾ ಜಿಲ್ಲಾ ಅಧಿಕಾರಿಗಳು ಜನಸಾಮಾನ್ಯರ ವಿರೋಧವಿದ್ದಲಿ ಅಂಗಡಿ ಅರಂಭಿಸುವುದಿಲ್ಲ ಎಂದು ಭರವಸೆಯನ್ನು ಸಹ ನೀಡಿದ್ದರು.
ಆದರೆ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಇನ್ನೇನೂ ಬಾರ್ ತೆರೆಯುತ್ತಾರೆ ಎನ್ನಲಾಗುತಿತ್ತು ಆದರೆ ಇಂತಹ ಸೂಕ್ಷ್ಮ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಯಾವುದೇ ಕಾರಣಕ್ಕೂ ಜುಮ್ಮಾ ಮಸೀದಿ ಮುಂಭಾಗದಲ್ಲಿ ಬಾರ್ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಸಂಬಂದಿಸಿದ ಸಚಿವರಿ ಅಧಿಕಾರಿಗಳಿಗೆ ಸೂಚಿಸಿದ್ದರು.
ಸದರಿ ಕಟ್ಟಡದ ಮಾಲೀಕ ಬಾರ್ ಮಾಲೀಕನೊಂದಿಗೆ ಮಾಡಿಕೊಂಡಿದ್ದ ಬಾಡಿಗೆ ಕರಾರು ಪತ್ರವನ್ನು ರದ್ದುಗೊಳಿಸುವುದರ ಮೂಲಕ ಸಾರ್ವಜನಿಕರ ಒಂದು ವರ್ಷದ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.
ಇಂದು ಸಾಗರಕ್ಕೆ ತೆರಳಿದ ಜುಮ್ಮಾ ಮಸೀದಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಶಾಸಕ ಬೇಳೂರು ಗೋಪಾಲಕೃಷ್ಣರವರನ್ನು ಸನ್ಮಾನಿಸಿ ಗೌರವಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ರಫ಼ಿ ,ಈದ್ ಮಿಲಾದ್ ಸಮಿತಿ ಅಧ್ಯಕ್ಷ ಮೈದೀನ್ ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ , ಗ್ರಾಪಂ ಸದಸ್ಯ ಆಸೀಫ಼್ , ಹಾಗೂ ಇನ್ನಿತರರಿದ್ದರು.