Headlines

ಪತ್ರಿಕಾ ರಂಗವು ಸಾರ್ವಜನಿಕರ ಧ್ವನಿಯಾಗಿ ಅವರ ಕುಂದು ಕೊರತೆಗಳನ್ನು ಸರ್ಕಾರಕ್ಕೆ ತಿಳಿಸುವಂತಾಗಬೇಕು : ಆರಗ ಜ್ಞಾನೇಂದ್ರ

ಹೊಸನಗರ : ಇಂದಿನ ದಿನದಲ್ಲಿ ಗ್ರಾಮೀಣ ಪತ್ರಿಕೋದ್ಯಮ ಪರಿಣಾಮಕಾರಿಯಾಗಿದ್ದು.. ಇಲ್ಲಿಯ ವರದಿಗಳು ರಾಜ್ಯಮಟ್ಟದ ಪತ್ರಿಕೆಗಳ ಮುಖಪಟದಲ್ಲಿ ಮನ್ನಣೆ ಪಡೆಯುತ್ತಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯ ಪಟ್ಟರು.


ಭಾನುವಾರದಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಹೊಸನಗರ ತಾ. ಶಾಖೆ, ಇವರಿಂದ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಆಯೋಜಿಸಿದ್ದ, ಪತ್ರಿಕಾ ದಿನಾಚರಣೆ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬಂತೆ ಪತ್ರಿಕಾ ರಂಗವು 4 ನೇ ಅಂಗವಾಗಿದೆ. ಇಂತಹ 4 ನೇ ಅಂಗವಾಗಿರುವ ಪತ್ರಿಕಾ ರಂಗವು ಸಾರ್ವಜನಿಕರ ಧ್ವನಿಯಾಗಿ ಅವರ ಕುಂದು ಕೊರತೆಗಳನ್ನು ಸರ್ಕಾರಕ್ಕೆ ತಿಳಿಸುವಂತಾಗಬೇಕು ಹಾಗೂ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪುವಂತಹಾ ಕೆಲಸ ಮಾಡಬೇಕಿದೆ. ಹೀಗಿರುವಾಗ ಇತ್ತೀಚಿಗೆ ವಾಟ್ಸ್ ಆಪ್, ಯೂಟೂಬ್ ಗಳಲ್ಲಿ ತತ್ ಕ್ಷಣ ಸುದ್ದಿ ಬಿತ್ತರಿಸುವ ಮಾಧ್ಯಮದಿಂದ ಅತೀ ಹೆಚ್ಚು ಪ್ರಚಲಿತದಲ್ಲಿರುವ ಮುದ್ರಣ ಮಾಧ್ಯಮಕ್ಕೆ ಸ್ವಲ್ಪ ಹಿನ್ನಡೆಯಾಗಿದೆ, ಆದರೂ ಮುದ್ರಣ ಮಾಧ್ಯಮವು ಜನ ಸಾಮಾನ್ಯರಿಗೆ ಸತ್ಯಾಸತ್ಯತೆ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.


ವರನಟ ಡಾ, ರಾಜ್ ಕುಮಾರ್ ಮೃತರಾದಾಗ ಅಂದಿನ‌ ಸರ್ಕಾರ‌ ಗೋಲಿಬಾರ್ ನಡೆಸಿದ್ದರಿಂದ ಮೂಲಕ 12 ಜನ ಪ್ರಾಣ ಕಳೆದು ಕೊಳ್ಳುವಂತಾಯಿತು. ಪುನೀತ್ ರಾಜ್‍ಕುಮಾರ್ ಮೃತರಾದ ಸಂದರ್ಭದಲ್ಲಿ 25 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ವೀಕ್ಷಣೆಗೆ ಬಂದಿದ್ದರು ಆದರೂ ಯಾವುದೇ ರೀತಿಯ ಅವಘಡ ನಡೆಯದಂತೆ ಶವ ಸಂಸ್ಕಾರ ನಡೆಸಲಾಯಿತು. ರಾಜಕುಮರ್ ರವರ ಮಕ್ಕಳು ಸೊಸೆಯಂದಿರು ನಮ್ಮನ್ನು ಪ್ರಶಂಸಿಸಿದ್ದಾರೆ ಎಂದರು.


ಯಾವುದೇ ರೀತಿಯ ಹಿನ್ನೆಲೆಯನ್ನು ಹೊಂದದ ನಾನು ಹಲವು ಹೋರಾಟಗಳನ್ನು ನಡೆಸುತ್ತಿರುವುದನ್ನು‌ ಗಮನಿಸಿದ ಸ್ಥಳೀಯ ಪತ್ರಿಕೆಗಳು ಗುರುತಿಸಿದ ನನ್ನನ್ನು ಈಗ ರಾಜ್ಯ ಗೃಹ ಸಚಿವನಾಗುವಂತೆ ಬೆಳೆಸಿದೆ ಎಂದರು.

ಸೇತುಬಂಧ ಯೋಜನೆಗೆ ಪತ್ರಕರ್ತರೇ ಕಾರಣ:

ಶಾಸಕ ಹರತಾಳು ಹಾಲಪ್ಪರವರು ಮಾತನಾಡಿ, ಶಾಲಾ ಸೇತು ಬಂಧ ಎಂಬ ಯೋಜನೆಗೆ ಸುಮಾರು 300 – 400 ಕೋಟಿ ಅನುಧಾನ‌ ಬಿಡುಗಡೆಗೆ ಸ್ಥಳಿಯ ಪತ್ರಕರ್ತರೇ ಕಾರಣರಾಗಿದ್ದಾರೆ. ಕಸ್ತೂರಿ ರಂಗನ್ ವರದಿ ಬಗ್ಗೆ ಪರ ವಿರೋಧ ನಡೆಯುತ್ತಿರುವ ಸಂದರ್ಭದಲ್ಲಿ ವಿಧಾನ ಮಂಡಲದಲ್ಲಿ ನಾನು ಹಾಗೂ ಸಚಿವರಾದ ಅರಗ ಜ್ಞಾನೇಂದ್ರರವರು ಚರ್ಚಿಸಿದಾಗ ಇದನ್ನು  ಮುಖ್ಯಮಂತ್ರಿ ಯವರು ಗಮನಿಸಿ ನಮ್ಮನ್ನು ದೆಹಲಿಯವರೆಗೂ ಪರಿಚಯಿಸಿದ್ದು ಸಾಗರ ಹಾಗೂ ಹೊಸನಗರ ಪತ್ರಕರ್ತರೇ. ಇದರಿಂದಾಗಿ ದೆಹಲಿಯಲ್ಲಿ ಒಂದು ಸಮಿತಿಯೇ ರಚನೆಯಾಗಿದೆ. ಇದು ನಮ್ಮ ಮಲೆನಾಡಿನ ಪತ್ರಕರ್ತರ ತಾಕತ್ತು ಎಂದರು.


ಇತ್ತೀಚಿನ ದಿನಗಳಲ್ಲಿ ವಾಟ್ಸ ಆಪ್ , ಯೂಟೂಬ್ ಗಳಂತಹಾ ಭರಾಟೆಯಲ್ಲಿ ಮುದ್ರಣ ಮಾಧ್ಯಮವು ತನ್ನದೇ ಆದ ಘನತೆಯನ್ನು ಉಳಿಸಿಕೊಂಡಿದೆ. ಹಿಂದೆ ಜೆ.ಹೆಚ್.ಪಟೇಲ್ ರವರು ಪತ್ರಕರ್ತರು ಕುಡುಕರು ಎನ್ನುವ ಕಾಲವಿತ್ತು, ಆದರೆ ಈಗ ನಿಜವಾದ ಪತ್ರಕರ್ತರು ಸಾಮಾಜಿಕ ಕಳಕಳಿಯನ್ನು ಹೊತ್ತು ಸರ್ಕಾರಕ್ಕೆ ಚಾಟಿ ಬೀಸುವಂತೆ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು. ಹೊಸನಗರ ತಾಲೂಕಿನ ಪತ್ರಕರ್ತರಿಗೆ ನಿವೇಶನ ನೀಡುವ ಸಂಬಂಧ ಸೂಕ್ತ ಕೈಗೊಳ್ಳುವ ಭರವಸೆ ನೀಡಿದರು.

ಪತ್ರಕರ್ತರಿಗೆ ಸಾಮಾಜಿಕ ಬದ್ಧತೆ ಬೇಕು:

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷ ಶಿವಾನಂದ್ ತಗಡೂರು ರವರು ಮಾತನಾಡಿ 2018 ರ ಪೂರ್ವದಲ್ಲಿ ಅನೇಕ ಪತ್ರಕರ್ತರು ಸಂಕಷ್ಟದಲ್ಲಿದ್ದಾರಲ್ಲದೇ ಅನೇಕ ಪತ್ರಿಕೆಗಳು ಮುಚ್ಚುವಂತಾಗಿತ್ತು, ನಂತರ ಚೇತರಿಕೆ ಕಂಡುಕೊಂಡ ಪತ್ರಿಕೆಗಳು ಕೋವೀಡ್ ಸಂದರ್ಭದಲ್ಲಿ ಅನೇಕ ಪತ್ರಿಕೆಗಳು ಅವನತಿಯ ಹಾದಿ ಹಿಡಿದವು. ಆದರೂ ಎದೆಗುಂದದ ಪತ್ರಕರ್ತರು ಸಾಮಾಜಿಕ ಕಳಕಳಿಯನ್ನು ಹೊತ್ತು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ಹೀಗಿರುವಾಗ ಛಾಯ ಚಿತ್ರ ಪತ್ರಕರ್ತರೊಬ್ಬರು ಅನಾರೋಗ್ಯದಿಂದ ಬಳಲುತ್ತಿರುವ ವಿಷಯವನ್ನು ಶಾಸಕರಾದ ಹರತಾಳು ಹಾಲಪ್ಪರವರ ಗಮನಕ್ಕೆ ತಂದ ಕೂಡಲೇ ಛಾಯಾಚಿತ್ರ ಗಾರರ ಮಗಳ ವಿಧ್ಯಾಭ್ಯಾಸಕ್ಕೆ 1 ಲಕ್ಷ ಸಹಾಯಧನ ನೀಡಿದ್ದನ್ನು ಸ್ಮರಿಸಿದರು.

ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್, ಯೂಟ್ಯೂಬ್, ಫೇಸ್ ಬುಕ್ ಜಾಲತಾಣಗಳಲ್ಲಿ ಅನೇಕ ಚಾನಲ್ ಗಳು ರಾತ್ರೋರಾತ್ರಿ ಹುಟ್ಟಿಕೊಂಡು ರಾಶಿರಾಶಿ ಪತ್ರಕರ್ತರು ತಾವು ಒಬ್ಬ ಪತ್ರಕರ್ತರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಅನೇಕ ಕ್ರೈಂ ಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಪತ್ರಕರ್ತರಿಗೆ ಸಾಮಾಜಿಕ ಬದ್ಧತೆ ಬೇಕು, ನಿಜವಾದ ಪತ್ರಕರ್ತರು ಪತ್ರಿಕೆಗಳ ಬಗ್ಗೆ ಕನಿಷ್ಠ 2 ವರ್ಷಗಳಾದರೂ ತರಭೇತಿಯನ್ನು ಪಡೆದುಕೊಂಡು ಬರಬೇಕಿದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ ಪತ್ರಕರ್ತರಿಗಾಗಿ ಕ್ಷೇಮಾಭಿವೃದ್ಧಿ ಯೋಜನೆಯನ್ನು ರೂಪಿಸಲು ಶಿವಮೊಗ್ಗ ನಗರ ಸಭೆಗೆ ಮನವಿ ಮಾಡಲಾಗಿತ್ತು, ಆ ಮನವಿಗೆ ಸ್ಪಂದಿಸಿದ ನಗರ ಸಭೆಯು ಕ್ಷೇಮಾಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಅದರಂತೆಯೇ ಹೊಸನಗರ ತಾಲೂಕಿನ‌ ಪತ್ರಕರ್ತರಿಗೆ ಕ್ಷೇಮಾಭಿವೃದ್ಧಿ ಯೋಜನೆಯನ್ನು ಜಾರಿಗೆ ತರಬೇಕೆಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪರಿಗೆ ಮನವಿ ಮಾಡಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲ್ಲೂಕು ಅಧ್ಯಕ್ಷ ರವಿ ಬಿದನೂರು, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪತ್ರಕರ್ತರಿಗೆ ನಿವೇಶನ ಹಂಚಿಕೆಯಾಗಿದೆ, ಆದರೆ  ಹೊಸನಗರ, ತೀರ್ಥಹಳ್ಳಿಯ ಪತ್ರಕರ್ತರಿಗೆ ನಿವೇಶನ ಹಂಚಿಕೆಯಾಗದಿರುವುದು ಬೇಸರವಾಗಿದೆ ಆದ ಕಾರಣ ಮಾನ್ಯ ಶಾಸಕರು ಹಾಗೂ ಸಚಿವರು ಇಲ್ಲಿನ ಪತ್ರಕರ್ತರಿಗೆ ನಿವೇಶನ ಒದಗಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.



ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರಗೋಡು, ರಾಜ್ಯ ಸಮಿತಿ ಸದಸ್ಯರಾದ ಎನ್.ರವಿಕುಮಾರ್ (ಟೆಲೆಕ್ಸ್) ಶಿವಮೊಗ್ಗ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ ಅರುಣ್, ಪ.ಪಂ ಅಧ್ಯಕ್ಷರಾದ ಗುಲಾಬಿ ಮರಿಯಪ್ಪ, ತಹಶೀಲ್ದಾರರಾದ ವಿ.ಎಸ್ ರಾಜೀವ್, ಸೇರಿದಂತೆ ವಿವಿಧ ತಾಲ್ಲೂಕಿನ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.


ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪ್ರಜಾವಾಣಿ ನಿವೃತ್ತ ಸಹಾಯಕ ಸಂಪಾದಕ ಲಕ್ಷ್ಮಣ ಕೊಡಸೆ, ಪ್ರಜಾವಾಣಿ ನಿವೃತ್ತ ವರದಿಗಾರ ಪಿ.ಎನ್.ನರಸಿಂಹಮೂರ್ತಿ, ಕನ್ನಡಪ್ರಭ ವರದಿಗಾರ ಎಸ್.ಶಾಂತಾರಾಮ,  ಎಸ್ಎಸ್ಎಲ್ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ, ಎಸ್ಎಸ್ಎಲ್ಸಿ ಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯಸ್ಥರಿಗೆ, ಪದವಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪರನ್ನು ತಾಲ್ಲೂಕು ಸಂಘದಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಹಾಗು ಜಿಲ್ಲಾ ಪದಾಧಿಕಾರಿಗಳನ್ನು ಗೌರವಿಸಲಾಯಿತು.



ಇದೇ ವೇಳೆ ಹೊಸನಗರ ತಾಲೂಕಿನ ವಿವಿಧ ಪತ್ರಿಕೆಗಳ ವಿತರಕರುಗಳನ್ನು ಗೃಹಸಚಿವರು ಮತ್ತು ಶಾಸಕರು ಪುರಸ್ಕರಿಸಿದರು.

ಕಾರ್ಯಕ್ರಮದ ಆರಂಭಕ್ಕೂ ಮುನ್ನ ತೀರ್ಥಹಳ್ಳಿಯ ಶ್ರೀ ರಾಜರಾಜೇಶ್ವರಿ ನೃತ್ಯ ಕಲಾಕೇಂದ್ರದ ಕಲಾವಿದರಿಂದ ವೈವಿಧ್ಯಮಯ ಮನೋರಂಜನಾ ನೃತ್ಯ ಪ್ರದರ್ಶನ ಮೂಡಿ ಬಂದಿತು.

ಪುಟಾಣಿ ಬಾಲಕಿ ತಪಸ್ಯ ಆರ್ ಭಟ್ ಪ್ರಾರ್ಥನೆ, ಪ್ರಧಾನ ಕಾರ್ಯದರ್ಶಿ ರವಿ ನಾಗರಕೊಡಿಗೆ ಸ್ವಾಗತ, ಉಪಾಧ್ಯಕ್ಷ ಸಬಾಸ್ಟಿನ್ ಮ್ಯಾಥ್ಯೂಸ್ ವಂದನೆ ಸಲ್ಲಿಸಿದರು.


ಅಶ್ವಿನಿ ಸುಧೀಂದ್ರ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *