ಒಂದೇ ಮಳೆಗೆ ಬಯಲಾಯಿತು 50ಲಕ್ಷ ರೂ ಮೌಲ್ಯದ ಕಾಂಕ್ರೀಟ್ ರಸ್ತೆಯ ಕಳಪೆ ಕಾಮಗಾರಿ : ಸಿಡಿದೆದ್ದ ಗ್ರಾಮಸ್ಥರು

 ಕೆಲ ತಿಂಗಳ ಹಿಂದೆ 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ತೀರಾ ಕಳಪೆಯಾಗಿದ್ದು ಒಂದೇ ಮಳೆಗೆ ಜಲ್ಲಿ ಕಿತ್ತು ಬರುತ್ತಿದೆ ಎಂದು ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ-ಕೊಳವಂಕ ಗ್ರಾಮಸ್ಥರು ಆರೋಪಿಸಿದ್ದಾರೆ.


 ಶರಾವತಿ ಮುಳುಗಡೆ ಸಂತ್ರಸ್ಥರೆ ಹೆಚ್ಚಿರುವ ಕೊಳವಂಕ- ಬಸವಾಪುರ ಸಂಪರ್ಕ ರಸ್ತೆ ನಿರ್ಮಿಸುವಂತೆ ಸುಮಾರು 30 ವರ್ಷಗಳಿಂದ ಹೋರಾಟ ನಡೆಸಿ ಕೊನೆಗೂ ಕೊಳವಂಕ – ಬಸವಾಪುರ ಸಂಪರ್ಕ ರಸ್ತೆ ನಿರ್ಮಾಣಕ್ಕೆ ವರ್ಷಗಳ ಹಿಂದೆ 50 ಲಕ್ಷಕ್ಕೂ ಹೆಚ್ಚು ಹಣ ಮಂಜೂರಾಗಿತ್ತು.


ಮಿತಿ‌ಮೀರಿದ ಭ್ರಷ್ಟಾಚಾರವೋ ಅಥವಾ ಈ ಕುಗ್ರಾಮದ ಜನರ ದುರಾದೃಷ್ಟವೋ 50 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ 250 ಮೀ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿದ್ದು ಅದು ತೀರಾ ಕಳಪೆಯಿಂದ ಕೂಡಿದ್ದು ಮೊದಲ ಮಳೆಗೆ ಕಾಂಕ್ರೀಟ್ ರಸ್ತೆ ಮೇಲಿನ ಜಲ್ಲಿಗಳು ಕಿತ್ತು ಬಂದು ಚರಂಡಿ ಪಾಲಾಗುತ್ತಿದೆ.

ಈ ಬಗ್ಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಮಾತನಾಡಿದ ಅರಸಾಳು ಗ್ರಾಪಂ ಮಾಜಿ ಅಧ್ಯಕ್ಷರಾದ ರಘುಪತಿ 50 ಲಕ್ಷಕ್ಕೂ ಹೆಚ್ಚು ಮೊತ್ತದ ಈ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ,ಕಳಪೆ  ಕಾಮಗಾರಿ ಜಗಜ್ಜಾಹೀರು ಆಗುತ್ತದೆ ಎನ್ನುವ ಕಾರಣಕ್ಕೆ  ಈ ಮಾರ್ಗದಲ್ಲಿ ಶಾಸಕರಿಗೆ ಸಂಚರಿಸಲು ಸಹ ಅವರ ಹಿಂಬಾಲಕರು ಬಿಟ್ಟಿಲ್ಲ.ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು‌ ಕೂಡಾ ಕಷ್ಟಕರವಾಗಿದ್ದು ಅನೇಕ ಬೈಕ್ ಸವಾರರು ಬಿದ್ದು ಗಾಯಗೊಡಿದ್ದಾರೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದರು.


ಅರಸಾಳು ಗ್ರಾಪಂ ಸದಸ್ಯರಾದ ಯೋಗೆಂದ್ರ ನಾಯ್ಕ್ ಮಾತನಾಡಿ ನಾಡಿಗೆ ವಿದ್ಯುತ್ ನೀಡಲು ಸರ್ವಸ್ವವನ್ನೂ ತ್ಯಾಗ ಮಾಡಿ ಇಲ್ಲಿ ಬಂದು ನೆಲೆ ನಿಂತಿರುವ ಮುಳುಗಡೆ ಸಂತ್ರಸ್ಥರ ಬಹುದಿನಗಳ ಬೇಡಿಕೆಯಾದ ಕೊಳವಂಕ-ಬಸವಾಪುರ ರಸ್ತೆಗೆ ಅನುದಾನ ಮಂಜೂರಾದರು ಗುತ್ತಿಗೆದಾರರ ಕಳಪೆ ಕಾಮಗಾರಿಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು,ಓಡಾಡಲು ಕಷ್ಟಕರವಾಗಿದೆ.ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನ್ಯಾಯ ದೊರಕಿಸಿಕೊಡಬೇಕಾಗಿದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಗ್ರಾಮಸ್ಥರಾದ ನಾಗರಾಜ್ ಬಸವಾಪುರ ಮಾತನಾಡಿ ಸುದೀರ್ಘ ಹೋರಾಟಗಳ ನಂತರ ನಮ್ಮ ಗ್ರಾಮಕ್ಕೆ ಬಂದ ರಸ್ತೆ ಕಳಪೆಯಾಗಿ ನಿರ್ಮಿಸಿರುವುದು ತುಂಬಾ ನೋವುಂಟು ಮಾಡಿದೆ.ರಸ್ತೆಯ ಮೇಲೆ ಕಸ ಗುಡಿಸಿದರೆ ಜಲ್ಲಿ ಕಿತ್ತು ಬರುತಿದ್ದು ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ನಮಗೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಂಡರು.

ಈ ಸಂಧರ್ಭದಲ್ಲಿ ಗ್ರಾಮಸ್ಥರಾದ ನಾರಾಯಣಸ್ವಾಮಿ,ನಾಗರಾಜ್ ಹಾಗೂ ಇನ್ನಿತರರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *