ಹೊಸನಗರ ತಾಲೂಕಿನ ಹರಿದ್ರಾವತಿ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು,ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬ “ರಿಪಬ್ಲಿಕ್ ಆಫ್ ಹರಿದ್ರಾವತಿ” ಅಧಿಪತ್ಯ ಘೋಷಣೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ಹೌದು ಮಲೆನಾಡಿನಾದ್ಯಂತ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರು ಅಲ್ಪ ಮಟ್ಟಿಗೆ ಅದಕ್ಕೆ ಕಡಿವಾಣ ಹಾಕುವಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಹಾಗೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಯಶಸ್ವಿಯು ಆಗಿದೆ.ಆದರೆ ಹೊಸನಗರ ತಾಲೂಕಿನ ಹರಿದ್ರಾವತಿ ಎಂಬ ಸುಸಂಸ್ಕೃತ ಗ್ರಾಮದ ಶರಾವತಿ ಹಿನ್ನೀರಿನ ಕೆರೆಹಳ್ಳಿ ಪಾಯಿಂಟ್ ನಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬ “ರಿಪಬ್ಲಿಕ್ ಆಫ್ ಹರಿದ್ರಾವತಿ” ಘೋಷಿಸಿಕೊಂಡ ಹಾಗೆ ತನ್ನ ಮರಳು ಮಾಫ಼ಿಯಾ ಜಾಲವನ್ನು ಆಳವಾಗಿ ಬೇರೂರಿಸಿದ್ದಾನೆ ಎನ್ನಲಾಗುತ್ತಿದೆ.
ಆ ಪ್ರಭಾವಿ ಮುಖಂಡನ “ರಿಪಬ್ಲಿಕ್ ಅಫ್ ಹರಿದ್ರಾವತಿ” ಅಧಿಪತ್ಯದಲ್ಲಿ ಕೆರೆಹಳ್ಳಿ ಪಾಯಿಂಟ್ ನಲ್ಲಿ ಮರಳು ಸಾಗಾಟಕ್ಕೆ ಯಾವುದೇ ಪರ್ಮೀಟ್ ಅಗತ್ಯವಿಲ್ಲ.ಲಾರಿ ಅಥವಾ ಟಿಪ್ಪರ್ ಮಾಲೀಕರು ದಿನಕ್ಕೆ ಎಷ್ಟು ಬಾರಿಯಾದರು,ಎಷ್ಟು ಪ್ರಮಾಣವಾದರೂ ಮರಳು ಸಾಗಿಸಬಹುದು. ಆದರೆ ಪ್ರತಿ ತಿಂಗಳಿಗೊಮ್ಮೆ “ರಿಪಬ್ಲಿಕ್ ಅಫ್ ಹರಿದ್ರಾವತಿ” ಅಧಿಪತ್ಯ ಘೋಷಿಸಿರುವ ಆ ಮುಖಂಡನಿಗೆ 45000(ನಲವತ್ತೈದು ಸಾವಿರ)ರೂ ಹಣ ತಲುಪಿಸಿದರೆ ಸಾಕು ಉಳಿದದ್ದೆಲ್ಲಾ ಆತನೇ ನೋಡಿಕೊಳ್ಳುತ್ತಾನೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಸ್ಥಳೀಯರು.
ಆ ಸ್ವಯಂ ಘೋಷಿತ ಮುಖಂಡನ ಮರಳು ಮಾಫ಼ಿಯಾದ ವಿರುದ್ದ ಸಾಮಾಜಿಕ ಚಿಂತನೆಯುಳ್ಳ ಪ್ರಬುದ್ದ ವ್ಯಕ್ತಿಗಳು ದನಿಯೆತ್ತಿದರೆ ಅಂತಹವರ ದನಿಯಡಗಿಸಲು ಅವರ ವಿರುದ್ದ ತನ್ನ ಪಟಾಲಂ ಮೂಲಕ ಹಲ್ಲೆ,ದಬ್ಬಾಳಿಕೆ ನಡೆಸುವ ಮಟ್ಟಕ್ಕೆ ಆ ಮುಖಂಡನ ಮಾಫ಼ಿಯಾದ ಜಾಲ ಬೇರೂರಿದೆ.
ಅಂದಾಜಿನ ಪ್ರಕಾರ ಪ್ರತಿನಿತ್ಯ ಸುಮಾರು 40 ರಿಂದ 50 ಲೋಡ್ ಮರಳು ಹರಿದ್ರಾವತಿಯ ಕೆರೆಹಳ್ಳಿ ಹೊಳೆಯಿಂದ ಶಿವಮೊಗ್ಗ,ಸಾಗರ ಪಟ್ಟಣಗಳಿಗೆ ಸಾಗಿಸಲಾಗುತ್ತಿದೆ ಎನ್ನಲಾಗುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಜಾಣಕುರುಡು ಪ್ರದರ್ಶಿಸುತ್ತಿದ್ದಾರೋ ಅಥವಾ ಸ್ವಯಂ ಘೋಷಿತ ಮುಖಂಡನ ಜೊತೆ ಶಾಮೀಲಾಗಿದ್ದಾರೋ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ಅಕ್ರಮ ಮರಳುಗಾರಿಕೆಯ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇