ವಿಶ್ವ ಪಶುವೈದ್ಯಕೀಯ ದಿನಾಚರಣೆ :

ಮನುಷ್ಯನ ಅಗತ್ಯಗಳಿಗೆ ಎಲ್ಲವನ್ನೂ ನೀಡುವ, ಅವರ ಆರೋಗ್ಯವನ್ನು ವೃದ್ಧಿಸುವ ಹಾಗೂ ರೈತರ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವ ಗೋಮಾತೆ ಧನ್ಯಳು, ಮಾನ್ಯಳು ಎಂದು ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.


ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಶನಿವಾರ ಸರ್ಕಾರಿ ನೌಕರರ ಸಭಾ ಭವನದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆ ಹಾಗೂ ಡಾ| ಗೊಯಲ್ ವೆಟ್ ಫಾರ್ಮ ವೆಟರ್ನರಿ ಇನ್ ಹೋಮಿಯೋಪತಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆಯನ್ನು  ಹಾಗೂ ಜಿಲ್ಲೆಯ ಪಶುವೈದ್ಯರಿಗೆ ಜಿಲ್ಲಾ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಅವಲಂಬಿಸಿರುವ ಹೈನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಾಣಿಕೆ ಇವುಗಳಿಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಪಶುವೈದ್ಯರ ಪಾತ್ರ ಪ್ರಮುಖವಾದುದು. ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀ., ಹಾಲಿಗೆ 2 ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತಿತ್ತು. ಪ್ರಸ್ತುತ ಈ ಪ್ರೋತ್ಸಾಹಧನವನ್ನು 5 ರೂ.ಗೆ ಹೆಚ್ಚಿಸಲಾಗಿದೆ. ಭಾರತದ ಜಿಡಿಪಿ.ಗೆ ಕೃಷಿಯಿಂದ ಶೇ.16ರಷ್ಟು ಕೊಡುಗೆ ನೀಡಲಾಗುತ್ತಿದೆ. ಇದರಲ್ಲಿ ಶೇ.25ರಷ್ಟು ಪಶುಪಾಲಕರ ಪಾತ್ರವಿದೆ ಎಂದರು.

2006 ರಲ್ಲಿ ಜಿಲ್ಲೆಯಲ್ಲಿ ಪಶುವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಿ, ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. ಇದರಿಂದಾಗಿ ರೈತರಿಗೆ ನೆರವು ದೊರೆಯಲಿದೆ. ದೇಶ ಜಾನುವಾರು ಸಂಖ್ಯೆ ಮತ್ತು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ದಿನಂಪ್ರತಿ 18 ಬಿಲಿಯನ್‌ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ರಾಜ್ಯ 8ನೇ ಸ್ಥಾನದಲ್ಲಿರುವುದು ಹರ್ಷದ ಸಂಗತಿ ಎಂದರು.

ಪಶು ಪಾಲಕರ ಅನುಕೂಲಕ್ಕಾಗಿ ಪಶುಗಳಿಗೆ ಆಂಬುಲೆನ್ಸ್‌ ಪ್ರಾರಂಭಿಸಲಾಗಿದೆ. ಗೋಸಂರಕ್ಷಣಾ ಕಾಯ್ದೆ-2020ನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ವಯಸ್ಸಾದ ಜಾನುವಾರುಗಳನ್ನು ಸಂರಕ್ಷಿಸಲು ಜಿಲ್ಲೆಗೊಂದರಂತೆ ಗೋಶಾಲೆ ಪ್ರಾರಂಭಿಸಲು ಚಿಂತನೆ ನಡೆಸಲಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ. ಮೈಸೂರಿನ ಪಾಂಜರ್‌ಪೋಲ್‌ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ಯೋಜನೆಯಡಿಯಲ್ಲಿ ಗೋಶಾಲೆಗಳ ಪ್ರತಿ ಗೋವಿಗೆ ನಿರ್ವಹಣಾ ವೆಚ್ಚವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಪಶುಪಾಲನಾ ಇಲಾಖೆ ಆರಂಭವಾದಾಗಿನಿಂದ ನನೆಗುದಿಗೆ ಬಿದ್ದಿದ್ದ ಇಲಾಖಾ ಪುನಃರಚನೆ ಮಾಡಿ, ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ, ಪಶುವೈದ್ಯಾಧಿಕಾರಿಗಳ ಹುದ್ದೆಯನ್ನು ಗುಂಪು ಬಿ. ಯಿಂದ ಎ. ಗುಂಪಿಗೆ ಮೇಲ್ದರ್ಜೆಗೇರಿಸಲಾಗಿದೆ. ಹೊಸ ಹುದ್ದೆಗಳನ್ನು ಸೃಜಿಸಿ ಮುಂಬಡ್ತಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಪಶು ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲವನ್ನು ಗಮನಿಸಿ, ಅದಕ್ಕೆ ಪೂರಕವಾಗಿ ಸಹಕಾರ ನೀಡಲಾಗುವುದು ಎಂದರು.

ದೇಶಾದ್ಯಂತ ಗೋಮಾತೆಯನ್ನು ಮಾತೃ ಸ್ಥಾನದಲ್ಲಿಟ್ಟು ಪೂಜನೀಯ ಭಾವದಿಂದ ಕಾಣಲಾಗುತ್ತಿದೆ. ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳನ್ನು ಕಾಣುವ ನಾವು ಗೋರಕ್ಷಣೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಗೋವುಗಳ ಸೇವೆ ಅವಶ್ಯವಿರುವಂತೆಯೇ ಪಶುವೈದ್ಯರ ಬೇಡಿಕೆಯೂ ಹೆಚ್ಚಿದೆ. ಗೋವುಗಳ ಸೇವೆ ಮಾಡುವ ಪಶುವೈದ್ಯರ ಸೇವೆ ಅಭಿನಂದನೀಯ. ಕಾಲಕಾಲಕ್ಕೆ ಬದಲಾಗುತ್ತಿರುವ ವ್ಯವಸ್ಥೆಗೆ ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಪಶು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಪಶು ಸೇವೆಗೆ ಸಂಬಂಧಿಸಿದಂತೆ ಆಹ್ವಾನಿತ ತಜ್ಞರಿಂದ ತಾಂತ್ರಿಕ ವಿಚಾರ ಸಂಕಿರಣ ಹಾಗೂ ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.
 ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಆರ್.ರುದ್ರೇಗೌಡ, ಮೇಯರ್‌ ಸುನಿತಾ ಅಣ್ಣಪ್ಪ, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ| ಶಿವಯೋಗಿ ಬಿ. ಮತ್ತು ಡಾ| ಗೊಯಲ್ ವೆಟ್ ಫಾರ್ಮಾ ಸಂಸ್ಥಾಪಕರಾದ
ಭಾಸ್ಕರ್ ಗೊಯಲ್ ಮತ್ತು ಮ್ರುದಳ್ ಗೊಯಲ್,
M.D ಸತ್ಯ ಮತ್ತಿತರರಿದ್ದರು.

Leave a Reply

Your email address will not be published. Required fields are marked *