ರಾಜ್ಯಾದ್ಯಂತ ಈದುಲ್ ಫಿತ್ರ್(ರಂಜಾನ್) ಹಬ್ಬವನ್ನು ಮಂಗಳವಾರ (ಮೇ.3) ಆಚರಣೆ ಮಾಡಲಾಗುವುದು ಎಂದು ಚಂದ್ರ ದರ್ಶನ ಸಮಿತಿ ಪ್ರಕಟಿಸಿದೆ.
ರಂಜಾನ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಭಾನುವಾರ ಸಂಜೆ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಅಮೀರೆ ಶರೀಯತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ನಡೆದ ಚಂದ್ರ ದರ್ಶನ ಸಮಿತಿಯ ಸಭೆಯಲ್ಲಿ ಮಂಗಳವಾರ ಹಬ್ಬ ಆಚರಣೆ ಮಾಡಲಾಗುವುದೆಂದು ಘೋಷಿಸಲಾಯಿತು.
ಮಳೆ ಹಾಗೂ ಮೋಡ ಕವಿದ ವಾತಾವರಣ ಹಿನ್ನೆಲೆ ದೇಶದ ಯಾವುದೇ ಭಾಗದಲ್ಲಿ ಚಂದ್ರ ದರ್ಶನವಾದ ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಮೇ 3ರಂದು ಮಂಗಳವಾರ ಆಚರಿಸಲು ಕೇಂದ್ರೀಯ ಚಂದ್ರ ದರ್ಶನ ಸಮಿತಿ ತೀರ್ಮಾನಿಸಿದೆ.
ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗುವುದರಿಂದ ದ.ಕ., ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಈದುಲ್ ಫಿತ್ರ್ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಹಾಗೂ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಿಪ್ಪನ್ ಪೇಟೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಸುತ್ತಮುತ್ತಲಿನ ಎಲ್ಲ ಮಸೀದಿ ಕಮಿಟಿಯವರು ಮಂಗಳವಾರದಂದು ರಂಜಾನ್ ಹಬ್ಬ ಆಚರಿಸಲು ತೀರ್ಮಾನಿಸಿದ್ದಾರೆ.