ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಹರಿಹಾಯ್ದ ಶಾಸಕ ಹರತಾಳು ಹಾಲಪ್ಪ :

ಸಾಗರ : ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ನನ್ನನ್ನು ವಲಸಿಗ ಎಂದು ಟೀಕೆ ಮಾಡಿದ್ದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ. ರಾಜಕಾರಣದಲ್ಲಿ ವಲಸೆ ಸಹಜ. ಕಾಂಗ್ರೇಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಕೇರಳಕ್ಕೆ ಬಂದಿದ್ದು, ಡಿ.ಕೆ.ಶಿವಕುಮಾರ್ ಸಾತನೂರಿನಲ್ಲಿ ಸ್ಪರ್ಧೆ ಮಾಡಿದ್ದು, ಸಿದ್ದರಾಮಯ್ಯ ಬಾದಮಿಯಿಂದ ಸ್ಪರ್ಧೆ ಮಾಡಿದ್ದು ವಲಸೆ ರಾಜಕಾರಣವಲ್ಲವೇ ಎಂದು ಬೇಳೂರಿಗೆ ಟಾಂಗ್ ನೀಡಿದ ಹಾಲಪ್ಪ, ನಮ್ಮ ಪಕ್ಷದಲ್ಲೂ ಸಹ ತಮ್ಮ ಕ್ಷೇತ್ರ ಬಿಟ್ಟು ಮತ್ತೊಂದು ಕಡೆ ಹೋಗಿ ಸ್ಪರ್ಧೆ ಮಾಡಿದ ಉದಾಹರಣೆ ಇದೆ. ಮಾಜಿ ಶಾಸಕರು ಬಿಜೆಪಿಯಲ್ಲೂ ಸೊನ್ನೆಯಾಗಿದ್ದರೂ, ಈಗ ಕಾಂಗ್ರೇಸ್‍ನಲ್ಲೂ ಸೊನ್ನೆಯಾಗಿದ್ದಾರೆ. ಇದೀಗ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಅವರಿಗೆ ಟಿಕೇಟ್ ಸಿಗುವುದೇ ಅನುಮಾನ. ಇಷ್ಟು ವರ್ಷಗಳ ಕಾಲ ಸ್ವಂತ ಮನೆ ಮಾಡದೆ ಐ.ಬಿ.ಯಲ್ಲಿ ವಾಸವಿದ್ದ ಬೇಳೂರು ಈಗ ಗಾಂಧಿನಗರದಲ್ಲಿ ಮನೆ ಮಾಡಿಕೊಂಡು ಹಂದಿ ಕಾಟ ಎಂದು ಹೇಳುತ್ತಿದ್ದಾರೆ. ಒಂದರ್ಥದಲ್ಲಿ ಮಾಜಿ ಶಾಸಕರದ್ದು ಹತಾಶ ರಾಜಕಾರಣ ಎಂದು ಹೇಳಿದರು. 

ನಾನು ವಿದ್ಯಾಭ್ಯಾಸ ಸಂದರ್ಭದಿಂದಲೂ ಸಾಗರ ಕ್ಷೇತ್ರವ್ಯಾಪ್ತಿಯಲ್ಲೇ ವಾಸ ಮಾಡುತ್ತಿದ್ದೇನೆ. ಹರತಾಳು ಗ್ರಾಮದಲ್ಲಿ ನನ್ನ ಮನೆ ಇದೆ. ನಾನು ಚುನಾವಣೆಗೆ ನಿಲ್ಲುವ ಮೊದಲು ಸಾಗರದಲ್ಲಿ ಮನೆ ಮಾಡಿದ್ದೇನೆ. ಮಾಜಿ ಶಾಸಕರು ಇಷ್ಟು ದಿನ ಐ.ಬಿ.ಯ ಖಾಯಂ ನಿವಾಸಿ. ಈಗ ಯಾರೋ ಸಲಹೆ ನೀಡಿದ್ದಾರೆಂದು ಮನೆ ಮಾಡಿದ್ದಾರೆ. ನಾನು ವಲಸೆ ಹೋಗು ಸಂದರ್ಭದಲ್ಲಿ ವಲಸೆ ಹೋಗುತ್ತೇನೆ. ಇನ್ನು ಮುಂದೆ ಎಲ್ಲಿಯೂ ವಲಸೆ ಹೋಗುವುದಿಲ್ಲ. ಸಾಗರ ಕ್ಷೇತ್ರದಲ್ಲಿಯೆ ಇದ್ದು ರಾಜಕಾರಣ ಮಾಡುತ್ತೇನೆ ಎಂದು ತಿಳಿಸಿದರು.

ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಿಟ್ಟಿದ್ದು ರಿಪೇರಿ ಅಂಬ್ಯುಲೆನ್ಸ್ ಎಂದು ನಾನು ಸ್ಪಷ್ಟಪಡಿಸಿದ್ದೇನೆ. ಹೊಸ ಅಂಬ್ಯುಲೆನ್ಸ್ ಇನ್ನು ಎರಡು ತಿಂಗಳಿನಲ್ಲಿ ಬಿಡಲಾಗುತ್ತದೆ. ಭಾನುವಾರ ತುಮರಿಗೆ ಧಾರ್ಮಿಕ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಹೋಗಿದ್ದಾಗ ಮೃತ ವ್ಯಕ್ತಿಯ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಭೇಟಿ ನೀಡಿ ಸಾಂತ್ವಾನ ಹೇಳಲಾಗುತ್ತದೆ. ಮಾಜಿ ಶಾಸಕರು ಸೊರಬ ರಸ್ತೆ ಅಗಲೀಕರಣಕ್ಕೆ 20 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಾಗಾದರೆ ಬಿಡುಗಡೆಯಾದ 20 ಕೋಟಿ ರೂ. ಎಲ್ಲಿ ಹೋಯಿತು. ಹಿಂದೆ ಹೈದರಬಾದ್, ಗೋವಾ ರೆಸಾರ್ಟ್‍ಗೆ ಹೋದಾಗ ಖಾಲಿ ಮಾಡಿಕೊಂಡಿದ್ದಾರಾ ಎನ್ನುವುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿ ಎಂದ ಅವರು, ನಮ್ಮ ಕಾರ್ಯಕರ್ತರು ಸೊರಬ ರಸ್ತೆಯ ನಿವಾಸಿಗಳ ಬಳಿ ರೌಡಿಸಂ ಮಾಡಿದ್ದರ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ತಪ್ಪಿತಸ್ತರ ವಿರುದ್ದ ಎಫ್.ಐ.ಆರ್. ದಾಖಲು ಮಾಡಿಸುತ್ತೇನೆ ಎಂದು ಹೇಳಿದರು. 

ಗೋಷ್ಟಿಯಲ್ಲಿ ಕೆಳದಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ್ ಮಾತನಾಡಿದರು. ದೇವೇಂದ್ರಪ್ಪ, ಬಿ.ಟಿ.ರವೀಂದ್ರ,ಗಿರೀಶ್ ಗೌಡ ಇನ್ನಿತರರು ಹಾಜರಿದ್ದರು. 

Leave a Reply

Your email address will not be published. Required fields are marked *