ಶಿವಮೊಗ್ಗ: ಜಿಲ್ಲೆಯಲ್ಲಿ ಪೋಕ್ಸೋ ಕಾಯಿದೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗುತ್ತಿದೆ ಎಂದು ಶಿವಮೊಗ್ಗ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಕೊರೊನಾ ಬಳಿಕ ಪೋಕ್ಸೋ ಕಾಯಿದೆ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿದೆ. ಕಳೆದ 4 ವರ್ಷದಿಂದ ಪ್ರತಿವರ್ಷ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2017ರಲ್ಲಿ 87 ಪ್ರಕರಣಗಳು, 2018ರಲ್ಲಿ 99 ಪ್ರಕರಣಗಳು, 2019ರಲ್ಲಿ 117 ಪ್ರಕರಣಗಳು ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಾಗಿತ್ತು. ಆದರೆ ಕಳೆದ ವರ್ಷ 2020ರಲ್ಲಿ ಜಿಲ್ಲೆಯಲ್ಲಿ 136 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 2021ರ ಕಳೆದ 10 ತಿಂಗಳಲ್ಲಿ 104 ಪ್ರಕರಣಗಳು ದಾಖಲಾಗಿದೆ ಎಂದಿದ್ದಾರೆ.
ಇನ್ನು ಆಸ್ಪತ್ರೆಗಳು, ಮಕ್ಕಳ ರಕ್ಷಣಾ ಸಮಿತಿ ಇಲಾಖೆಗೆ ಮಾಹಿತಿ ನೀಡಿದ ಕಾರಣಕ್ಕೆ ಹಲವು ಪ್ರಕರಣ ದಾಖಲಾಗುತ್ತಿದ್ದು, ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಇದರ ಬಗ್ಗೆ ತಿಳಿದು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ದೂರು ದಾಖಲಾಗುತ್ತಿದೆ ಎಂದು ತಿಳಿಸಿದ್ದಾರೆ.