Headlines

ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ ಅಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ : ಶ್ರೀ ರಂಭಾಪುರಿ ಜಗದ್ಗುರುಗಳು : ಅದ್ದೂರಿಯಾಗಿ ಜರುಗಿದ ಮಳಲಿ ಮಠದ ಕಾರ್ತಿಕ ದೀಪೋತ್ಸವ

ರಿಪ್ಪನ್‌ಪೇಟೆ: ಕತ್ತಲೆ ಅಜ್ಞಾನದ ಸಂಕೇತವಾದರೆ ಬೆಳಕು ಜ್ಞಾನದ ಸಂಕೇತ. ಬಾಹ್ಯ ಕತ್ತಲೆ ಕಳೆಯಲು ದೀಪ ಬೇಕು. ಮನದ ಅಜ್ಞಾನ ದೂರ ಮಾಡಲು ಜ್ಞಾನ ಬೋಧಾಮೃತ ಬೆಳಕಿನ ಕಿರಣ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರೀಮದ್ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ ಅಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ. ಮನುಷ್ಯನ ಸ್ವಭಾವ ಕೂಡಾ ದೀಪದಂತಿರಬೇಕು. ಅಂಗಳದಲ್ಲಿ ಹುಲ್ಲು ವೇಗವಾಗಿ ಬೆಳೆದಷ್ಟು ಬಿಲ್ವ ವೃಕ್ಷ ಬೆಳೆಯುವುದಿಲ್ಲ. ಮೋಸ ವಂಚನೆ ಮಾಡುವ ಮನುಷ್ಯ ಬಹು ಬೇಗ ಬೆಳೆಯುವಂತೆ ಒಳ್ಳೆಯವರು ಬೆಳೆಯುವುದಿಲ್ಲ. ನಡೆಯುವ ದಾರಿಯಲ್ಲಿ ನಿಯತ್ತು ಇದ್ದರೆ ಅದನ್ನು ತಡೆಯುವ ತಾಕತ್ತೂ ಯಾರಿಗೂ ಇರುವುದಿಲ್ಲ. ಹಣದಿಂದ ಕಟ್ಟಿದ ಮನೆಯಲ್ಲಿ ಎಲ್ಲರೂ ಇರುತ್ತಾರೆ. ಆದರೆ ಗುಣದಿಂದ ಕಟ್ಟಿದ ಮನೆಯಲ್ಲಿ ಯೋಗ್ಯರಷ್ಟೇ ನೆಲೆಸುತ್ತಾರೆ. ಪ್ರಾಮಾಣಿಕ ಸಂಬಂಧಗಳು ಶುದ್ಧ ನೀರಿನ ಹಾಗೆ. ಅವುಗಳಿಗೆ ಬಣ್ಣ ಆಕಾರ ಇರುವುದಿಲ್ಲ. ಆದರೂ ನೀರು ಅತ್ಯವಶ್ಯಕ.ಸತ್ಯ ಮನುಷ್ಯನನ್ನು ಬದಲಿಸುತ್ತದೆ. ಆದರೆ ಸತ್ಯವನ್ನು ಯಾರಿಂದಲೂ ಬದಲಿಸಲಾಗದು. ವೀರಶೈವ ಧರ್ಮ ಮಾನವೀಯ ಸಂಬಂಧಗಳನ್ನು ಬೆಸೆದು ಸಮಾಜದಲ್ಲಿ ಸಾಮರಸ್ಯ ಶಾಂತಿ ನೆಲೆಗೊಳಿಸಲು ಸಾಧ್ಯವಾಗುವುದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ.
ಧರ್ಮ ಸಮಾರಂಭ ಉದ್ಘಾಟಿಸಿದ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಮಳಲಿ ಸಂಸ್ಥಾನ ಮಠದ ಆಶೀರ್ವಾದದಿಂದ ಬೆಳೆದ ನಾನಿಂದು ಗೃಹ ಸಚಿವರಾಗಿ ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿದ ಭಾಗ್ಯ ನನ್ನದಾಗಿದೆ. ಜೀವನ ಉನ್ನತಿ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲವಾಗಿದೆ. ಸ್ಥಾನಮಾನ ಹಾಗೂ ಆಸ್ತಿಗಳು ಬದಲಾಗಬಹುದು. ಆದರೆ ಮಾನವೀಯ ಮೌಲ್ಯಗಳು ಮತ್ತು ಸಂಬಂಧಗಳು ಎಂದೆಂದಿಗೂ ಶಾಶ್ವತವಾಗಿ ಉಳಿಯಲು ಸಂಸ್ಕಾರಯುಕ್ತ ಜೀವನ ಕಾರಣವಾಗಿದೆ. ಎಲ್ಲ ಧರ್ಮಗಳು ಉದಾತ್ತವಾದ ಚಿಂತನೆಗಳನ್ನು ಕೊಟ್ಟಿದ್ದು ಅವುಗಳ ಅನುಷ್ಠಾನ ನಾವೆಲ್ಲಾ ಮಾಡಬೇಕಾಗಿದೆ. ಮಳಲಿಮಠದ ಡಾ. ನಾಗಭೂಷಣ ಶ್ರೀಗಳು ಮಠದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಸಮಾಜದಲ್ಲಿ ಶಾಂತಿ ಸದ್ಭಾವನೆ ಬೆಳೆಸಲು ಸದಾ ಶ್ರಮಿಸುತ್ತಿದ್ದಾರೆ ಎಂದು ಹರುಷ ವ್ಯಕ್ತಪಡಿಸಿದರು.
ಸಂಸದರಾದ ಬಿ.ವೈ ರಾಘವೇಂದ್ರ,ಶಾಸಕರಾದ ಹರತಾಳು ಹಾಲಪ್ಪ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಗದ್ಗುರುಗಳ ಆಶೀರ್ವಾದ ಪಡೆದು,ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ವಿವಿಧ ಮಠದ ಪೂಜ್ಯ ಗುರುಗಳು ಆಶೀರ್ವಚನ ನೀಡಿದರು.

ಮಳಲಿಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕೋಣಂದೂರು ಶ್ರೀಪತಿಪಂಡಿತಾರಾಧ್ಯ ಸ್ವಾಮಿಜಿ, ಕವಲೇದುರ್ಗದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮಿಜಿ, ಕಡೇನಂದಿಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮಿಜಿ, ಹಾರನಹಳ್ಳಿ, ಶ್ರೀಶಿವಯೋಗಿ ಶಿವಾಚಾರ್ಯ ಸ್ವಾಮಿಜಿ, ಬಂಕಾಪುರದ ಶ್ರೀ ರೇವಣಸಿದ್ದ ಶಿವಾಚಾರ್ಯಸ್ವಾಮಿಜಿ ಉದ್ಯಮಿ ಕೆ.ಆರ್.ಪ್ರಕಾಶ್, ಜಿಲ್ಲಾ ಸಹಕಾರಿ ದುರೀಣ ಆರ್.ಎಂ.ಮಂಜುನಾಥಗೌಡ, ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ,ಹಿರಿಯ ಪತ್ರಕರ್ತರಾದ ಬಸವರಾಜ್ ರಿಪ್ಪನ್ ಪೇಟೆ,ಆನಂದ್ ಮೆಣಸೆ,ಕಗ್ಗಲಿ ಲಿಂಗಪ್ಪ,ಎನ್ ವರ್ತೇಶ್, ಕೀರ್ತಿ ಕೆ ಗೌಡ, ರಾಜೇಂದ್ರ ಘಂಟೆ,ನಿರಂಜನ್,ಕಾರ್ತಿಕ್ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *