WhatsApp Channel Join Now
Telegram Channel Join Now


ಶಿವಮೊಗ್ಗ : ಕುಖ್ಯಾತ ರೌಡಿಶೀಟರ್ ಹೆಬ್ಬೆಟ್ ಮಂಜನ ಹೆಸರಿನಲ್ಲಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯೊಬ್ಬರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.


 ಉದ್ಯಮಿಯೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಾಹಿರಾ ಬಾನು ಎಂಬ ಮಹಿಳೆಯನ್ನು ಶಿವಮೊಗ್ಗ ಸೈಬರ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಮಹಿಳೆಯ ಪತಿ ಸದ್ದಾಂ ಹುಸೇನ್ ಬೆಂಗಳೂರಿನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಈತ ಜೈಲಿನಿಂದಲೇ ಶಿವಮೊಗ್ಗದ ಉದ್ಯಮಿಗೆ ವಾಟ್ಸಪ್ ಕಾಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ.ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದ್ದಾನೆ.

 ಮಲೆನಾಡಿನಲ್ಲಿ ಹೆಬ್ಬೆಟ್ ಮಂಜನ ಹೆಸರು ಚಾಲ್ತಿಯಲ್ಲಿದೆ. ಆತನ ಸಹಚರರು ಫುಲ್ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಹೆಬ್ಬೆಟ್ ಮಂಜನ ಗ್ಯಾಂಗ್ ಮಲೆನಾಡಿನಲ್ಲಿ ಅಕ್ರಮ ಮರಳು ದಂಧೆ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಎಲ್ಲ ಚಟುವಟಿಕೆಗಳು ಹೆಬ್ಬೆಟ್ ಮಂಜನ ಹೆಸರಿನಲ್ಲಿ ನಡೆಯುತ್ತಿವೆ.

ಬೆದರಿಕೆ ಕರೆ ಬಂದಿದ್ದಾಗ ಉದ್ಯಮಿ ಒಮ್ಮೆ 50 ಸಾವಿರ ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದೇ ತಡ ಶಿವಮೊಗ್ಗ ಸೈಬರ್ ಠಾಣೆಯ ಸಿಪಿಐ ಗುರುರಾಜ್ ತಮ್ಮ ತಂಡದ ಜೊತೆ ಭಟ್ಕಳಗೆ ಹೋಗಿ ಆಪರೇಶನ್​ಗೆ ಮುಂದಾಗಿದ್ದರು. ಮಹಿಳೆ ಖಾತೆಯ ಜಾಡು ಹಿಡಿದು ತನಿಖೆ ಕೈಗೊಂಡಾಗ ಭಟ್ಕಳದ ಸಾಹಿರಾ ಬಾನು ಅವರದ್ದು ಎಂಬುದು ಗೊತ್ತಾಗಿದೆ.

ಪರಪ್ಪನ ಅಗ್ರಹಾರದಲ್ಲಿರುವ ಸದ್ದಾಂ ಹುಸೇನ್ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಸ್ಪೋಟಕ್ಕೆ ಬೇಕಾಗಿರುವ ಜೆಲೆಟಿನ್ ಕಡ್ಡಿಯನ್ನು ಈತನೇ ಪೂರೈಕೆ ಮಾಡಿದ್ದನು. ಭಟ್ಕಳದಲ್ಲಿ ಸದ್ದಾಂ ಮೇಲೆ ವಿವಿಧ ಕೇಸ್ ಗಳು ಕೂಡಾ ದಾಖಲು ಆಗಿವೆ.

ಸದ್ಯ ತನಿಖೆ ಮುಂದುವರೆದಿದೆ. ಸದ್ದಾಂ ಜೊತೆಯಲ್ಲಿ ಇನ್ನೂ ನಾಲ್ಕೈದು ಜನರು ಇದ್ದಾರೆ. ಎಲ್ಲರೂ ಸೇರಿ ಇಂತಹ ಬೆದರಿಕೆ ಕೃತ್ಯದಲ್ಲಿ ತೊಡಗಿದ್ದಾರೆ. ವಿಚಾರಣೆ ಬಳಿಕವಷ್ಟೇ ಹೆಬ್ಬೆಟ್ ಮಂಜ ಮತ್ತು ಇವರ ನಡುವಿನ ಸಂಬಂಧ ಕುರಿತು ಮಾಹಿತಿಗಳು ಲಭ್ಯ ಆಗಬೇಕಿದೆ.

Leave a Reply

Your email address will not be published. Required fields are marked *