ಹೊಸನಗರ ಭೂನ್ಯಾಯ ಮಂಡಳಿ ಸದಸ್ಯರಾಗಿ ಗರ್ತಿಕೆರೆಯ ಬಷೀರ್ ಅಹಮದ್ ನೇಮಕ
ರಿಪ್ಪನ್ ಪೇಟೆ – ಹೊಸನಗರ ತಾಲ್ಲೂಕು ಭೂನ್ಯಾಯ ಮಂಡಳಿ ಸದಸ್ಯ ಸ್ಥಾನಕ್ಕೆ ಗರ್ತಿಕೆರೆ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಷೀರ್ ಅಹಮದ್ ಹೆಚ್ ಎಂ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಪ್ರಸ್ತುತ ಗರ್ತಿಕೆರೆ ಗ್ರಾಪಂ ಸದಸ್ಯರಾಗಿರುವ ಬಷೀರ್ ಅಹಮದ್ ಹೆಚ್ ಎಂ ಅವರು ಸ್ಥಳೀಯ ರಾಜಕಾರಣದಲ್ಲಿ ಸಕ್ರೀಯರಾಗಿದ್ದು, ಗ್ರಾಮೀಣ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವಾಗ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಒದಗಿಕೆಗೆ ಕೈಜೋಡಿಸಿದ್ದರು.
ಸ್ಥಳೀಯ ಜನತೆ ಹಾಗೂ ಪಕ್ಷದ ಮುಖಂಡರ ವಿಶ್ವಾಸ ಗಳಿಸಿರುವ ಅವರು, ಭೂನ್ಯಾಯ ಮಂಡಳಿಯಲ್ಲಿ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಗೆ ಬದ್ಧರಾಗಿರುತ್ತಾರೆ ಎಂಬ ನಿರೀಕ್ಷೆಯಿದೆ.

 
                         
                         
                         
                         
                         
                         
                         
                         
                         
                        