ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು – ಗುರಣ್ಣ ಹೆಬ್ಬಾಳ್

ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು – ಗುರಣ್ಣ ಹೆಬ್ಬಾಳ್
   
ರಿಪ್ಪನ್ ಪೇಟೆ : ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೆ ಕಳೆದುಕೊಳ್ಳುತ್ತಾನೆ ಹಾಗೂ ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು ಎಂದು ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಹೆಬ್ಬಾಳ್ ಹೇಳಿದರು

ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ತಿಕೆರೆ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.ಇಂದಿನ ಯುವಕರು ತಂದೆ, ತಾಯಿ ಹಾಗೂ ಗುರುಗಳ ಋಣ ಎಂದಿಗೂ ಮರೆಯಬಾರದು. ಸದ್ಗುಣ ಸಚ್ಚಾರಿತ್ರ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು. ಮಾದಕ ವಸ್ತುಗಳು ನಮ್ಮ ವ್ಯಕ್ತಿತ್ವಕ್ಕೆ ಹಾಗೂ ಆರೋಗ್ಯಕ್ಕೆ ಮಾರಕವಾಗಿವೆ. ಇನ್ನು ಮೊಬೈಲ್ ಎಷ್ಟು ಪ್ರಯೋಜನವಾಗಿದೆ ಅಷ್ಟೇ ದುಷ್ಪರಿಣಾಮವಿದೆ. ವಿದ್ಯಾರ್ಥಿಗಳಾದ ನೀವು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ , ಅಬಕಾರಿ ವೃತ್ತ ನಿರೀಕ್ಷಕ ನಾಗರಾಜ್ ರಿಪ್ಪನ್ ಪೇಟೆ ಪಿಎಸ್‌ಐ ರಾಜುರೆಡ್ಡಿ ಹಾಗೂ ಇನ್ನಿತರರಿದ್ದರು.