ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶಕ್ಕೆ ನಿರ್ಬಂಧ
ಶಿವಮೊಗ್ಗ : ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಶಿವಮೊಗ್ಗ ಪ್ರವೇಶಕ್ಕೆ ಅನುಮತಿ ನಿರಾಕಾರಿಸಲಾಗಿದೆ.ಅವರನ್ನು ಶಿವಮೊಗ್ಗ ಪ್ರವೇಶಿಸಿದಂತೆ ತಡೆದು ವಾಪಸ್ ಕಳುಹಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಶಿವಮೊಗ್ಗದಲ್ಲಿ ಇವತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ ಪ್ರಮೋದ್ ಮುತಾಲಿಕ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅವರನ್ನು ಶಿವಮೊಗ್ಗ ಹೊರವಲಯದ ರಾಗಿಗುಡ್ಡದ ಬಳಿ ತಡೆದು ವಾಪಸ್ ಕಳುಹಿಸಲಾಗಿದೆ. ಫೆಬ್ರವರಿ 28 ರಿಂದ 7 ದಿನಗಳ ಕಾಲ ಪ್ರಮೋದ್ ಮುತಾಲಿಕ್ ಶಿವಮೊಗ್ಗ ಜಿಲ್ಲೆ ಪ್ರವೇಶಿಸದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಶ್ರೀರಾಮ ಸೇನೆ ವತಿಯಿಂದ ಪ್ರಕಟಿಸಲಾದ ಲವ್ ಜಿಹಾದ್ ಪುಸ್ತಕ ಬಿಡುಗಡೆಗಾಗಿ ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ಇದಕ್ಕೂ ಮುನ್ನ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ನಂತರ ಭದ್ರಾವತಿಯಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಬೇಕಿತ್ತು. ಆದರೆ, ಪ್ರಮೋದ್ ಮುತಾಲಿಕ್ ಶಿವಮೊಗ್ಗ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ -ಹೊನ್ನಾಳಿ ರಸ್ತೆಯ ರಾಗಿಗುಡ್ಡ ಕ್ರಾಸ್ ನಲ್ಲಿ ಪ್ರಮೋದ್ ಮುತಾಲಿಕ್ ಅವರ ಕಾರ್ ತಡೆದ ಪೊಲೀಸರು ಆದೇಶ ಪ್ರತಿ ತೋರಿಸಿ ಶಿವಮೊಗ್ಗ ಪ್ರವೇಶಿಸದಂತೆ ಹೇಳಿದ್ದಾರೆ.
ಇದ್ರಿಂದ ಕುಪಿತಗೊಂಡ ಪ್ರಮೋದ್ ಮುತಾಲಿಕ್ , ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಹಿಂದುಗಳ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದ್ದಾರೆ.