ಜನಸ್ನೇಹಿ ಡಿವೈಎಸ್’ಪಿ ಗಜಾನನ ವಾಮನ ಸುತಾರರವರಿಗೆ ಗೌರವ ಪೂರ್ವಕ ಬೀಳ್ಕೊಡುಗೆ ನೀಡಿದ ಪಟ್ಟಣ ಪಂಚಾಯತ್
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯ, ನಾವೆಲ್ಲರೂ ಬಯಲುಸೀಮೆಯ ವ್ಯಕ್ತಿಗಳು ಆದರೆ ಈಗ ನಿಜವಾಗ್ಲೂ ತೀರ್ಥಹಳ್ಳಿ ಬಿಟ್ಟು ಹೋಗಲು ಇಷ್ಟವಿಲ್ಲ, ಇಲ್ಲಿನ ಪರಿಸರ, ಜನರನ್ನು ಬಿಟ್ಟು ಹೋಗಲು ನಿಜವಾಗಿ ಬೇಸರ ಆಗುತ್ತಿದೆ ಎಂದು ಡಿವೈಎಸ್ ‘ಪಿ ಗಜಾನನ ವಾಮನ ಸುತಾರ ಹೇಳಿದರು.
ಭಾನುವಾರ ಪಟ್ಟಣ ಪಂಚಾಯತ್ ವತಿಯಿಂದ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಗೌರವ ಪೂರ್ವಕ ಬೀಳ್ಕೊಡುಗೆ ಸಮಾರಂಭದ ವೇಳೆ ಮಾತನಾಡಿದರು.
ಜನಸ್ನೇಹಿ ಅನ್ನುವುದಕ್ಕಿಂತ ಇಲ್ಲಿನ ಜನ ನಿಜವಾಗಿ ಹೃದಯವಂತರು, ಇಲ್ಲಿನ ಜನರಿಂದ ಯಾವುದೇ ಕಷ್ಟ ಆಗಲಿಲ್ಲ. ಸರ್ಕಾರ ಏನು ಜವಾಬ್ದಾರಿ ಕೊಟ್ಟಿದ್ದರೋ ಅಷ್ಟೇ ಮಾಡಲಿ ಎನ್ನುತ್ತಾರೆ.ಇಲ್ಲಿನ ರಾಜಕೀಯ ಮುಖಂಡರು ಸಹ ಯಾವುದೇ ಗಾಂಜಾ, ಇಸ್ಪೀಟ್ ಹೀಗಿರುವ ಕ್ರೈಂ ಗೆ ಸಪೋರ್ಟ್ ಮಾಡುತ್ತಿರಲಿಲ್ಲ. ಅದು ಬಹಳ ಖುಷಿ ಆಗುತ್ತದೆ.ಇಲ್ಲಿ ನಡೆಯುವ ವಿಧವಿಧದ ಕಾರ್ಯಕ್ರಮಗಳು ನೋಡುವುದೇ ಚಂದ. ಇಲ್ಲಿನ ಎಲ್ಲಾ ಶಾಲೆ, ಕಾಲೇಜು ಭೇಟಿ ಮಾಡಿದ್ದೇನೆ. ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಬಹಳ ಕಷ್ಟವಾಗಿದೆ. ನಾನು ಬಂದಾಗ ಹನಿಟ್ರ್ಯಾಪ್ ಘಟನೆ ಆಗಿತ್ತು. ಕೂಡಲೇ ಅಂತಹ ಕೃತ್ಯ ಎಸಗುವವರ ವಿರುದ್ದ ಕ್ರಮ ಕೈಗೊಂಡು ಇನ್ನು ಮುಂದೆ ಆ ರೀತಿ ಜಾಲವನ್ನೇ ಬಂದ್ ಮಾಡಿದ್ದೇವೆ ಎಂದರು.
ಪಟ್ಟಣ ಪಂಚಾಯತ್ ಸದಸ್ಯರ ಬಗ್ಗೆ ಹೇಳುವುದಾದರೆ ಎಲ್ಲರೂ ಸಹ ನಗು ಮೊಗದಲ್ಲಿ ಇರುತ್ತಾರೆ. ಪ. ಪಂ ಸದಸ್ಯರಲ್ಲದೇ ಇತರ ಸಂಘ ಸಂಸ್ಥೆಯಲ್ಲಿ ಭಾಗಿಯಾಗಿ ಕಾರ್ಯನಿರ್ವಹಿಸುತ್ತಾರೆಅದನ್ನು ನೋಡಿ ಸಂತೋಷ ಆಗುತ್ತದೆ. ನಿಮ್ಮೆಲ್ಲರ ಶುಭ ಹಾರೈಕೆಗಳು ನನ್ನ ನಮ್ಮ ಕುಟುಂಬದ ಮೇಲೆ ಇರಲಿ. ಆದರೆ ಖಂಡಿತವಾಗಿ ಶಿವಮೊಗ್ಗಕ್ಕೆ ಬರುತ್ತೇನೆ ಎಂದರು.
ರಹಮತ್ ಉಲ್ಲಾ ಅಸಾದಿ ಮಾತನಾಡಿ ತೀರ್ಥಹಳ್ಳಿಯಲ್ಲಿ ಹಲವಾರು ಅಧಿಕಾರಿಗಳು ಬಂದು ವರ್ಗಾವಣೆ ಆಗಿದ್ದಾರೆ. ಆದರೆ ಮೊಟ್ಟ ಮೊದಲ ಬಾರಿ ಪಟ್ಟಣ ಪಂಚಾಯತ್ ನಲ್ಲಿ ಅಧಿಕಾರಿಯೊಬ್ಬರಿಗೆ ಗೌರವ ಬೀಳ್ಕೊಡುಗೆ ನೀಡುತ್ತಿದ್ದೇವೆ. ಶಾಂತಿ ಸೌಹಾರ್ದ ನಡೆಸುವುದು ಬಹಳ ಕಷ್ಟ ಆದರೆ ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಒಬ್ಬ ಅಧಿಕಾರಿ ವರ್ಗಾವಣೆ ಆದಾಗ ಜನರ ಪ್ರೀತಿಗಳಿಸುತ್ತಾನೋ ಆತ ನಿಜವಾಗಿ ಆ ಊರಿನ ಮೆಚ್ಚುಗೆ ಗಳಿಸಿದ್ದಾನೆ ಎಂದರ್ಥ. ಹನಿಟ್ರ್ಯಾಪ್ ಹಾಗೂ ಗಾಂಜಾ ವಿಚಾರದಲ್ಲಿ ಒಳ್ಳೆಯ ಕೆಲಸ ನಿರ್ವಹಿಸಿದ್ದಾರೆ. ಎರಡು ವರ್ಷದಲ್ಲಿ ಅತ್ಯಂತ ಸೂಕ್ಷ್ಮ ಘಟನೆಗಳು ನಡೆದರೂ ಕೂಡ ಅತ್ಯಂತ ಬುದ್ದಿವಂತಿಕೆಯಿಂದ ಕೆಲಸ ಮಾಡಿದ್ದಾರೆ.ಇವರ ಮುಂದಿನ ಜೀವನ ಯಶಸ್ಸು ತರಲಿ ಎಂದು ಹಾರೈಸಿದರು.

ಗೀತಾ ರಮೇಶ್ ಮಾತನಾಡಿ ಒಬ್ಬ ಒಳ್ಳೆಯ ಅಧಿಕಾರಿಯ ವರ್ಗಾವಣೆ ಎಲ್ಲರಲ್ಲೂ ಬೇಸರ ತರಿಸಿದೆ. ನಿಜಕ್ಕೂ ಜನಸ್ನೇಹಿ ಅಧಿಕಾರಿ ಎಂದರೆ ತಪ್ಪಾಗಲ್ಲ. ಕಳೆದ ಮೂರು ವರ್ಷಗಳಿಂದ ತೀರ್ಥಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಯಾರೇ ಆಗಲಿ ವರ್ಗಾವಣೆ ಆಗುವುದು ಸಹಜ. ಆದರೆ ಕೆಲವರು ವರ್ಗಾವಣೆ ಆಗುವಾಗ ಬೇಸರವಾಗುತ್ತದೆ. ಮುಂದಿನ ಭವಿಷ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ ಎರಡು ವರ್ಷ ಎಂಟು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಮೂರು ಎಳ್ಳಮಾವಾಸ್ಯೆ ಜಾತ್ರೆಯನ್ನು ನಡೆಸಿದ್ದಾರೆ. ಅದರಲ್ಲೂ ಈ ಬಾರಿ ಅತ್ಯಂತ ಯಶಸ್ವಿ ಜಾತ್ರೆಯನ್ನು ನಡೆಸಿಕೊಟ್ಟಿದ್ದಾರೆ.
ಅಧಿಕಾರ ಎಷ್ಟು ಇರುತ್ತದೋ ಅಷ್ಟೇ ಮಾಡುತ್ತಾರೆ. ಆದರೆ ಗಜಾನನ ವಾಮನ ಸುತಾರ ಅವರು ಎಲ್ಲಾ ವಿಷಯದಲ್ಲೂ ಯಾವುದೇ ಕಾರ್ಯಕ್ರಮ ಇರಲಿ ಆಗಮಿಸುತ್ತಿದ್ದರು. ಒಳ್ಳೆಯ ಅಧಿಕಾರಿಗಳು ಎಲ್ಲೇ ಇರಲಿ ಒಳ್ಳೆಯ ಕೆಲಸವಾಗುತ್ತದೆ. ಇವರು ಸಹ ಆದಷ್ಟು ಬೇಗ ಶಿವಮೊಗ್ಗಕ್ಕೆ ಅಡಿಷನಲ್ ಎಸ್ ಪಿ ಆಗಿ ಬರಲಿ ಎಂದು ಹಾರೈಸಿದರು.
ಸುಶೀಲ ಶೆಟ್ಟಿ ಮಾತನಾಡಿ ಉನ್ನತ ವ್ಯಕ್ತಿತ್ವದ ವ್ಯಕ್ತಿಗೆ ಬೀಳ್ಕೊಡುಗೆ ನೀಡುತ್ತಿದ್ದೇವೆ. ಪಟ್ಟಣದ ವಿಷಯದಲ್ಲಿ ಗಲಾಟೆ, ಕೋಮುಗಲಭೆ ನಿಗಿಸುವ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮಾಜಮುಖಿ ಕೆಲಸ ಮಾಡುವ ಅಧಿಕಾರಿಗಳಿಗೆ ಸಮಾಜ ಗೌರವ ನೀಡುತ್ತದೆ. ಡಿವೈಎಸ್ ಪಿ ಎಂಬ ಗರ್ವ ಮೆರೆಯಲಿಲ್ಲ. ವಿದ್ಯಾರ್ಥಿಗಳಿಗೆ ನೀಡಿರುವ ಮಾರ್ಗದರ್ಶನ ನೀಡುವುದು ಯಾವುದು ಮರೆಯಲು ಸಾಧ್ಯವಿಲ್ಲ. ಸಾಮಾಜಿಕ, ಧಾರ್ಮಿಕ ಯಾವುದೇ ಸಮಾರಂಭ ಆಗಲಿ ಎಲ್ಲರ ಜೊತೆಗೆ ಬೆರೆತು ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ಹಾರೈಸಿದರು.
ಜ್ಯೋತಿ ಮೋಹನ್ ಮಾತನಾಡಿ ಜನಮೆಚ್ಚಿದ ಅಧಿಕಾರಿ ಹೇಗೋ ಇಂತಹ ಅಧಿಕಾರಿಯ ಅಗತ್ಯ ನಮ್ಮ ತೀರ್ಥಹಳ್ಳಿಗೆ ಇತ್ತು. ಯಾವುದೇ ಕಾರ್ಯಕ್ರಮ ಆಗಿದ್ದರೂ ಕುಟುಂಬದ ಜೊತೆಗೆ ಬಂದು ಭಾಗಿಯಾಗುತ್ತಿದ್ದರು. ಅಧಿಕಾರದ ದರ್ಪ ತೋರಿಸುತ್ತಿರಲಿಲ್ಲ. ಇವರ ಮುಂದಿನ ಭವಿಷ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮಂಜುಳಾ ನಾಗೇಂದ್ರ ಮಾತನಾಡಿ ನಿಮ್ಮಂತಹ ಅಧಿಕಾರಿಗಳು ಸಿಕ್ಕಿರುವುದು ನಮ್ಮ ತೀರ್ಥಹಳ್ಳಿ ಜನತೆಯ ಪುಣ್ಯ ಎಂದರೆ ತಪ್ಪಾಗಲ್ಲ, ಪೊಲೀಸ್ ಇಲಾಖೆ ಎಂದರೆ ಒತ್ತಡದ ಕೆಲಸ ಎನ್ನುತ್ತಾರೆ. ಆದರೆ ಅಂತಹ ಒತ್ತಡದಲ್ಲೂ ಎಲ್ಲರ ಜೊತೆಗೆ ಬೆರೆತು ವಿಶ್ವಾಸಗಳಿಸುವುದು ಸುಲಭವಲ್ಲ. ನಿಮ್ಮ ಮುಂದಿನ ಜೀವನ ಯಶಸ್ಸಿನ ಕಡೆಗೆ ಸಾಗಲಿ ಎಂದು ಶುಭ ಹಾರೈಸಿದರು.
ರತ್ನಾಕರ್ ಶೆಟ್ಟಿ ಮಾತನಾಡಿ ಅವರ ಮನೆ ನಮ್ಮ ವಾರ್ಡ್ ನಲ್ಲಿ ಇದ್ದಿದ್ದೇ ನಮಗೆ ಸಂತೋಷ ಆಗಿತ್ತು. ಬೆಟ್ಟಮಕ್ಕಿಯಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಭಾಗಿಯಾಗುತ್ತಿದ್ದರು. ಈಗ ಇವರ ವರ್ಗಾವಣೆ ನಿಜವಾಗಿಯೂ ಬೇಸರ ತರಿಸಿದೆ. ಆದರೆ ಅಧಿಕಾರಿಗಳು ವರ್ಗಾವಣೆ ಆಗುವುದು ಸಹಜ. ಡಿವೈಎಸ್’ಪಿ ಯವರಿಗೆ ಒಳ್ಳೆಯದಾಗಲಿ ಎಂದರು.
ರಮೇಶ್ ಶೆಟ್ಟಿ ಮಾತನಾಡಿ ಜನಸ್ನೇಹಿ ಅಧಿಕಾರಿಗಳು ಆಗಿದ್ದರೂ ಕೆಲವೊಂದು ಬಾರಿ ರಾಜಕಾರಣದ ವಿಚಾರದಿಂದ ಅಥವಾ ಇತರೆ ವಿಚಾರಗಳಿಂದ ವರ್ಗಾವಣೆ ಆಗುತ್ತದೆ. ಕ್ರೈಂ ವಿಚಾರದಲ್ಲಿ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳಿಗೆ ಮಾರ್ಗದರ್ಶನ ಮಾಡುವುದು ಯಾರು ಮರೆಯುವುದಿಲ್ಲ. ವಯಸ್ಸಿಗೆ ಮೀರಿದ ಪ್ರಬುದ್ಧತೆ ಇತ್ತು. ತಮ್ಮಂತಹ ಅಧಿಕಾರಿಗಳು ಹೆಚ್ಚು ಹೆಚ್ಚು ಇದ್ದರೆ ನಮ್ಮ ಊರು ಸಹ ಚೆಂದವಾಗಿರುತ್ತದೆ. ಶಿವಮೊಗ್ಗಕ್ಕೆ ಎಸ್ ಪಿ ಆಗಿ ಬನ್ನಿ ಎಂದು ಶುಭಹಾರೈಸಿದರು.
ಡಾನ್ ರಾಮಣ್ಣ ಮಾತನಾಡಿ ಸಮರ್ಥ ಪೊಲೀಸ್ ಅಧಿಕಾರಿ ಇದ್ದರೆ ಸಮಾಜ ಒಳ್ಳೆಯ ರೀತಿ ಸಾಗುತ್ತದೆ ಎನ್ನುವುದಕ್ಕೆ ಗಜಾನನ ವಾಮನ ಸುತಾರ ಅವರೇ ಕಾಣಿಸುತ್ತಾರೆ. ಕಾನೂನಿನ ಕಡೆ ಒಂದೆಡೆಯಾದರೆ ಅದಕ್ಕೂ ಮೀರಿದ ಜ್ಞಾನ ಅವರಲ್ಲಿ ಇತ್ತು. ಪೊಲೀಸ್ ಹಾಗೂ ಪತ್ರಕರ್ತರ ನಡುವೆ ಒಂದು ಸಮಸ್ಯೆ ಆದಾಗ ಅದನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ತೀರ್ಥಹಳ್ಳಿಯ ಜೊತೆಗೆ ಯಾವಾಗಲು ಸಂಪರ್ಕ ಇರಲಿ. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಬನಮ್, ಧಾರ್ಮಿಕ ಪರಿಷತ್ ನಿರ್ದೇಶಕರಾದ ವರಲಕ್ಷ್ಮಿ, ಅಮರನಾಥ್ ಶೆಟ್ಟಿ, ಸೇರಿ ಹಲವರು ಉಪಸ್ಥಿತರಿದ್ದರು.
