Ripponpete | ಕಾಡಾನೆ ದಾಳಿಗೆ ಮೃತಪಟ್ಟ ರೈತನ ಮನೆಗೆ ಬಿ ವೈ ರಾಘವೇಂದ್ರ ಭೇಟಿ, ಸಾಂತ್ವಾನ
ರಿಪ್ಪನ್ಪೇಟೆ : ಇಲ್ಲಿನ ಬಸವಾಪುರ ಗ್ರಾಮದಲ್ಲಿ ಆನೆ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ಮಡಿವಾಳ್ ಮನೆಗೆ ಸಂಸದರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಮೃತ ತಿಮ್ಮಪ್ಪ ಮಡಿವಾಳ್ ರವರ ಕುಟುಂಬಕ್ಕೆ ಸರ್ಕಾರದಿಂದ ದೊರಕಬಹುದಾದ ಎಲ್ಲಾ ರೀತಿಯ ನೆರವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಘಟನೆ ನಡೆದ ದಿನ ಚುನಾವಣಾ ಕಾರ್ಯ ನಿಮಿತ್ತ ಬೈಂದೂರಿನಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರಿಂದ ಬರಲು ಆಗಿರಲಿಲ್ಲ ಆ ಸಂಧರ್ಭದಲ್ಲಿ ಮಾಜಿ ಸಚಿವರಾದ ಹರತಾಳು ಹಾಲಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಡಿ ಎಸ್ ಅರುಣ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಕೂಡಲೇ 15 ಲಕ್ಷ ಪರಿಹಾರ ನೀಡಬೇಕೆಂಬ ಕಾನೂನು ಇದೆ ಈ ಬಗ್ಗೆ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಆದಷ್ಟು ಬೇಗ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ,ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘರಾಜ್ ,ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ , ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಹಾಗೂ ಇನ್ನಿತರರಿದ್ದರು