ಆಸ್ತಿಯಲ್ಲಿ ಪಾಲು ಕೊಡದೆ, ಎರಡನೇ ಮದುವೆಯಾಗಿ ಮಗು ಮಾಡಿಕೊಂಡ ಅಪ್ಪನನ್ನು ಮೂವರು ಮಕ್ಕಳೇ ಸುಪಾರಿ ಕೊಟ್ಟು ಕೊಲ್ಲಿಸಿದ ಘಟನೆ ಶಿಕಾರಿಪುರದಲ್ಲಿ ನಡೆದಿದೆ.
ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದ ಘಟನೆಯನ್ನು ಪೊಲೀಸರು ಭೇದಿಸಿದ್ದಾರೆ. ನ. 29ರಂದು ಕೆಎಸ್‌ಆರ್‌ಪಿಯ ನಿವೃತ್ತ ಎಸ್‌ಐ ನಾಗೇಂದ್ರಪ್ಪ ಎಂಬವರ ಶವ ಚರಂಡಿಯಲ್ಲಿ ಸಿಕ್ಕಿತ್ತು. ಇವರು ಶಿರಾಳಕೊಪ್ಪದ ಬೋವಿ ಗ್ರಾಮದವರು. ಆಸ್ತಿ ವಿಚಾರದಲ್ಲಿ ಕೊಲೆ ಶಂಕಿಸಿದ್ದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಕಂಬಿ ಎಣಿಸುವಂತೆ
ಮಾಡಿದ್ದಾರೆ.
ಬೋವಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಎಂಬವರಿಂದ ಕೊಲೆ ನಡೆದಿದೆ. ಭದ್ರಾವತಿ ಕೋರ್ಟ್‌ಗೆ ಹೋಗಿ ಶಿಕಾರಿಪುರಕ್ಕೆ ಬಂದಿದ್ದ ನಾಗೇಂದ್ರಪ್ಪ ಅವರನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದ ಆರೋಪಿಗಳು ಪುಣೀದಹಳ್ಳಿ ಗ್ರಾಮದ ಬಳಿ ಕರೆದೊಯ್ದು ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿದ್ದರು. ನಂತರ ಉಸಿರುಗಟ್ಟಿಸಿ ಸಾಯಿಸಿ ಅದೇ ಆಟೋದಲ್ಲಿ ಶವ ಸಾಗಿಸಿ ಉಡುಗಣಿ ಗ್ರಾಮದಿಂದ ಕುಸೂರು ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿನ ಚರಂಡಿಗೆ ಬಿಸಾಡಿದ್ದರು.
ಇದಕ್ಕೂ ಮುನ್ನ ನ.9ರಂದು ಸಹ ಅವರ ಕೊಲೆ ಯತ್ನ ನಡೆದಿತ್ತು. ಲಗೇಜ್ ಆಟೋದಿಂದ ನಾಗೇಂದ್ರಪ್ಪರ ಬೈಕಿಗೆ ಡಿಕ್ಕಿ ಹೊಡಿಸಲಾಗಿತ್ತು. ನಾಗೇಂದ್ರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆ ಬಗ್ಗೆ ದೂರು ಸಹ ದಾಖಲಾಗಿರಲಿಲ್ಲ. ನಾಗೇಂದ್ರಪ್ಪನವರಿಗೆ ಐದೂವರೆ ಎಕರೆ ಭೂಮಿಯಿದ್ದು, ಉತ್ತಮ ಫಸಲು ಬರುತ್ತಿತ್ತು. ಐವರು ಮಕ್ಕಳಿದ್ದ ನಾಗೇಂದ್ರಪ್ಪ, ಪತ್ನಿ ನಿಧನಗೊಂಡಿದ್ದರಿಂದ ಎರಡು ವರ್ಷಗಳ ಹಿಂದೆ ವಿಧವೆಯೊಬ್ಬರನ್ನು ಮದುವೆಯಾಗಿದ್ದರು. ಮಕ್ಕಳೇ ನಿಂತು ಮದುವೆ ಮಾಡಿಸಿದ್ದರು. ಎರಡನೇ ಮದುವೆಯಿಂದ ಗಂಡು ಮಗು ಜನಿಸಿತ್ತು. ತಮಗೆ ಆಸ್ತಿ ಪಾಲು ಮಾಡಿಕೊಡುವಂತೆ ಮೊದಲ ಹೆಂಡತಿ, ಮಕ್ಕಳು ನಾಗೇಂದ್ರಪ್ಪನಿಗೆ ದುಂಬಾಲು ಬಿದ್ದಿದ್ದರು. ನಾಗೇಂದ್ರಪ್ಪ ಆಸ್ತಿ ಪಾಲಿಗೆ ನಿರಾಕರಿಸಿದ್ದರು.
ಊರಲ್ಲಿ ನ್ಯಾಯ ಪಂಚಾಯಿತಿ ನಡೆದು, ಐದೂವರೆ ಎಕರೆ ಜಾಗದಲ್ಲಿ ಪಾಲು ಮಾಡುವ ಸಂಧಾನ ನಡೆದಿತ್ತು. ಆದರೆ ನಾಗೇಂದ್ರಪ್ಪ ಸಂಧಾನಕ್ಕೆ ಒಪ್ಪಿರಲಿಲ್ಲ. ಮಗ ಉಮೇಶ್ ಭದ್ರಾವತಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ದಾವೆ ವಿಚಾರಣೆ ನಡೆದಿತ್ತು. ಅಪ್ಪನ ಹಠದಿಂದ ಸಿಟ್ಟಾಗಿದ್ದ ಮಂಜುನಾಥ್, ಉಮೇಶ್, ಅಪ್ಪನನ್ನೇ ಮುಗಿಸಲು ಯೋಜನೆ ಹಾಕಿದ್ದರು. ಬೋಗಿ ಗ್ರಾಮದ ಮೂವರಿಗೆ ತಂದೆಯ ಕೊಲೆಗೆ ಸುಪಾರಿ ನೀಡಿ, ಅಪ್ಪನನ್ನು ಕೊಂದು, ಹುಗಿದರೆ ಐದು ಲಕ್ಷ ಕೊಡುವ ವಾಗ್ದಾನ ಮಾಡಿದ್ದರು. ಅದರಂತೆ ಕೊಲೆ ನಡೆದಿದೆ.