ಶಿಕ್ಷಣ ಸಂಸ್ಥೆಗಳ ಸೇವಾ ಚಟುವಟಿಕೆಯಿಂದ ಮಕ್ಕಳಲ್ಲಿ ಮೌಲ್ಯ ಹೆಚ್ಚುತ್ತದೆ – ಚಿದಂಬರ
ಹೊಸನಗರ : ಮಕ್ಕಳಲ್ಲಿ ಮಾನವೀಯ ಮೌಲ್ಯ ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳು ಸೇವಾ ಚಟುವಟಿ ಹೆಚ್ಚಿಸಬೇಕು ಎಂದು ಮಾರುತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ ಅಭಿಪ್ರಾಯಪಟ್ಟರು.
ಇಂದು ತಾಲ್ಲೂಕಿನ ಬಟ್ಟೆಮಲ್ಲಪ್ಪ ಶ್ರೀ ವ್ಯಾಸ ಮಹರ್ಷಿ ಗುರುಕುಲದ ತ್ರಯೋದಶ ಪ್ರದರ್ಶಿನಿ ಕಾರ್ಯಕ್ರಮದ ಎರಡನೇ ಸೇವಾ ಚಟುವಟಿಕೆ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಇಂದಿನ ಶಿಕ್ಷಣದಲ್ಲಿ ಮಾನವೀಯ ಮೌಲ್ಯ ಹೆಚ್ಚಿಸುವ ಪಠ್ಯ ಕೊರತೆ ಹೆಚ್ಚುತ್ತಿದೆ. ಮತ್ತೊಂದೆಡೆ ಪೋಷಕರಿಂದ ಕೂಡ ಮಕ್ಕಳಿಗೆ ಮಾನವೀಯ ಮೌಲ್ಯ ಹೆಚ್ಚಿಸುವ ಕೆಲಸ ಆಗುತ್ತಿಲ್ಲ. ಎಲ್ಲೆಲ್ಲೂ ಸ್ವಾರ್ಥ ಕೇಂದ್ರೀತ ಬದುಕು ನಿರ್ಮಾಣ ಆಗಿದೆ. ಹೀಗಾಗಿ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳೇ ಇಂದು ನಿಜವಾದ ದಿಕ್ಕು. ಈ ನಿಟ್ಟಿನಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲ ನಿರಂತರ ಮಾನವೀಯ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
ಪುರಪ್ಪೆಮನೆ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಮಳವಳ್ಳಿ ಮಾತನಾಡಿ, ಇಂತಹ ಮಾನವೀಯ ಸೇವಾ ಚಟುವಟಿಕೆಗಳನ್ನು ಜನಪ್ರತಿನಿದಿನಗಳು ಹೆಚ್ಚು ಹೆಚ್ಚು ಮಾಡಬೇಕು. ನಾವು ರಕ್ತ ಅವಶ್ಯಕತೆ ಇದ್ದಾಗ ಬ್ಲಡ್ ಬ್ಯಾಂಕ್ ಗಳಿಗೆ ಕರೆ ಮಾಡಿ ಒತ್ತಡ ಹಾಕುತ್ತೇವೆ. ಬದಲಿಗೆ ನಾವೇ ಮುಂದೆ ನಿಂತು ಇಂತಹ ಚಟುವಟಿಕೆ ಮಾಡಿದಾಗ ಜನ ಸೇವೆಯನ್ನು ಹೆಚ್ಚು ಅರ್ಥಪೂರ್ಣವಾಗಿ ಮಾಡಬಹುದು ಎಂದರು.
ಯುವ ಮುಖಂಡ ರವಿಕುಮಾರ್ ಯಡೆಹಳ್ಳಿ ಮಾತನಾಡಿ, ಶ್ರೀ ವ್ಯಾಸ ಮಹರ್ಷಿ ಗುರುಕುಲ ಮಾನವೀಯ ತರಬೇತಿಯ ಶಾಲೆಯಾಗಿದೆ. ಇಲ್ಲಿ ಕಲಿತ ಮಕ್ಕಳಲ್ಲಿ ನಾವು ಹೆಚ್ಚು ಮಾನವೀಯ ಮೌಲ್ಯ ಕಾಣುತ್ತೇವೆ. ಇದನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚು ಅಳವಡಿಸಿಕೊಂಡರೆ ಅರ್ಥಪೂರ್ಣ ಶಿಕ್ಷಣದ ಜೊತೆಗೆ ಮಾನವೀಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಸೇನಾನಿ ಹಾಗೂ ಗುರುಕುಲದ ಮಾರ್ಗದರ್ಶಕ ಕೆ. ಪಿ. ಕೃಷ್ಣಮೂರ್ತಿ, ಶ್ರೀ ವ್ಯಾಸ ಮಹರ್ಷಿ ಗುರುಕುಲ ತನ್ನ 13ನೇ ವರ್ಷದ ಕಾರ್ಯಕ್ರಮವನ್ನು ದುಂದು ವೆಚ್ಚ ಮಾಡಿ, ಹಣ ವ್ಯಯ ಮಾಡುವುದರ ಬದಲು ಸಮಾಜ ಸೇವಾ ಚಟುವಟಿಕೆ ನಡೆಸುತ್ತಾ ಬರುತ್ತಿದೆ. ನೇತ್ರ ಶಿಬಿರ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಜೊತೆಗೆ ಮಕ್ಕಳ ಸಂಸ್ಕಾರಕ್ಕಾಗಿ ಸಾಂಸ್ಕೃತಿಕ ಚಟುವಟಿಕೆ ಶಿಕ್ಷಣದ ಜೊತೆ ಜೊತೆಗೆ ಕಳೆದ 13ವರ್ಷಗಳಿಂದಲೂ ನಿರಂತರವಾಗಿ ಮಾಡಿಕೊಂಡು ಬಂದಿದೆ. ಇದರ ಪರಿಣಾಮವಾಗಿ ಇಲ್ಲಿನ ಮಕ್ಕಳು ಕಡಿಮೆ ಅವಧಿಯಲ್ಲೇ ಇಲ್ಲಾ ರಂಗದಲ್ಲೂ ಸಾಧನೆ ಮಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿಯ ಹನುಮಂತಪ್ಪ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ರಕ್ತದ ಸಮಸ್ಯೆ ಹೆಚ್ಚಿತ್ತು. ಇಂತಹ ಸಂದರ್ಭದಲ್ಲಿ ಕೂಡ ಶ್ರೀ ವ್ಯಾಸ ಮಹರ್ಷಿ ಗುರುಕುಲ ನಮ್ಮ ಜೊತೆ ಕೈ ಜೋಡಿಸಿ ರಕ್ತದಾನ ಶಿಬಿರ ನಡೆಸಿ ರಕ್ತದ ತುರ್ತಿಗೆ ನೆರವಿಗೆ ಧಾವಿಸಿತ್ತು. ಹೀಗಾಗಿ ಪ್ರತಿ ವರ್ಷ ಈ ಸಂಸ್ಥೆಯೊಂದಿಗೆ ಎರಡರಿಂದ ಮೂರು ಶಿಬಿರಗಳನ್ನು ನಡೆಸುತ್ತಾ ಬರುತ್ತಿದ್ದೇವೆ ಎಂದರು.
ಸಭೆಯಲ್ಲಿ ಅರೋಗ್ಯಧಿಕಾರಿ ಪ್ರಭಾಕರ್, ಉದ್ಯಮಿ ಗಣಪತಿ, ವೈದ್ಯಧಿಕಾರಿ ಹೀರಾ, ಡಾ. ಗೌತಮ್, ಶ್ರೀನಿವಾಸ್ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕುಮಾರಿ ಸುಧಾ ಸ್ವಾಗತಿಸಿ, ರಶ್ಮಿ ಬಿ. ಹೆಚ್. ನಿರೂಪಿಸಿದರು. ನಿಧಿ ಸಂಗಡಿಗರು ಪ್ರಾರ್ಥಿಸಿ, ಸಂಸ್ಥೆ ಅಧ್ಯಕ್ಷ ಮಂಜುನಾಥ್ ಬ್ಯಾಣದ ವಂದಿಸಿದರು.