ರಿಪ್ಪನ್ಪೇಟೆ : ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.
ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್, ಕಾಲೊನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ಹೆಚ್ಚಾಗಿದೆ.
ಪಟ್ಟಣದ , ಶಬರೀಶನಗರ,ಗಾಂಧಿನಗರ,ಪ್ರಗತಿನಗರ,ಕುವೆಂಪು ಬಡಾವಣೆ,ಚೌಡೇಶ್ವರಿ ಬೀದಿ,ಹಳೇ ಸಂತೆ ಮಾರುಕಟ್ಟೆ ರಸ್ತೆ,ಬನ್ನಿ ನಗರ ,ವಿದ್ಯಾನಗರ,ವಿನಾಯಕ ನಗರ ,ತಿಲಕ್ ನಗರ ,ಮದೀನಾ ಕಾಲೋನಿ ,ಶ್ರೀರಾಮ ನಗರ,ನೆಹರು ಬಡಾವಣೆ ಸೇರಿದಂತೆ ಪಟ್ಟಣದ ನಾಲ್ಕುಮುಖ್ಯ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
ಹಿಡಿಶಾಪ:
ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಗ್ರಾಮಡಳಿತಕ್ಕೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಮೀನಮೇಷ ಎಣಿಸುತ್ತಿರುವ ಪರಿಣಾಮ ಸಾರ್ವಜನಿಕರು ಗ್ರಾಮಾಡಳಿತಕ್ಕೆ ಹಿಡಿಶಾಪ ಹಾಕುತ್ತಿದಾರೆ.
ಬೀದಿನಾಯಿಗಳ ಹಾವಳಿ ತಡೆಗಟ್ಟಲು ಸರ್ಕಾರದ ಆದೇಶ ಏನಿದೆ.??
ರಾಜ್ಯದಲ್ಲಿ ಬೀದಿ ನಾಯಿ (Street Dogs) ಗಳ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಫೆಬ್ರವರಿಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದೆ.
ರಾಜ್ಯಾದ್ಯಂತ ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ನಗರಾಭಿವೃದ್ಧಿ ಇಲಾಖೆ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆಯಿಂದ ಜಂಟಿ ಸುತ್ತೋಲೆ ಹೊರಡಿಸಲಾಗಿದೆ.
ಇಲಾಖೆ ಹೊರಡಿಸಿರುವಂತ ಸುತ್ತೋಲೆಯಲ್ಲಿ ರಾಜ್ಯದ ಎಲ್ಲಾ ಗ್ರಾಪಂ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ, ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಯೋಜನೆಯನ್ನು ಕೈಗೊಳ್ಳುವುದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಹೇಳಿದೆ.
ಈ ಯೋಜನೆಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುವುದರಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣವಾಗುವುದರ ಜೊತೆಗೆ ನಾಯಿ ಕಡಿತ ಮತ್ತು ರೆಬೀಸ್ ರೋಗ ನಿಯಂತ್ರಣ ಮಾಡಲು ಸಾಧ್ಯವಾಗುವುದು ಎಂದು ತಿಳಿಸಿದೆ. ಎಬಿಸಿ ನಿಯಮದಡಿಯಲ್ಲಿ ರಾಜ್ಯಾದ್ಯಂತ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಣಗೊಳಿಸಲು, ಕೆಲ ಮಾರ್ಗಸೂಚಿ ಕ್ರಮಗಳನ್ನು ಕೂಡ ಇಲಾಖೆ ಹೊರಡಿಸಿದೆ.
ಒಟ್ಟಾರೆಯಾಗಿ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರು ಎಚ್ಚೆತ್ತುಕೊಂಡು ಬಿದಿನಾಯಿಗಳ ಉಪಟಳವನ್ನು ನಿಯಂತ್ರಿಸಲು ಮುಂದಾಗುವರೋ ಕಾದು ನೋಡಬೇಕಾಗಿದೆ……