ಹೈಟೆನ್ಷನ್ ವಿದ್ಯುತ್ ಟವರ್ ಮೇಲೆ ವ್ಯಕ್ತಿಯ ಮೃತದೇಹ ಪತ್ತೆ – ಕಾರಣ ನಿಗೂಡ | A man’s burnt body was found on a 110 KV high-tension electricity tower in JPS Colony, Bhadravathi. Fire and emergency personnel rescued the body from a height of 60 feet.
ಭದ್ರಾವತಿ: ನಗರದ ಜೆಪಿಎಸ್ ಕಾಲೋನಿಯಲ್ಲಿ 110 ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗದ ಟವರ್ ಮೇಲೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಸುಮಾರು 60 ಅಡಿ ಎತ್ತರದಲ್ಲಿರುವ ವಿದ್ಯುತ್ ಟವರ್ನ ಒಂದು ಭಾಗದಲ್ಲಿ ವ್ಯಕ್ತಿಯ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿದ್ಯುತ್ ಟವರ್ ಏರಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ಆತ್ಮಹತ್ಯೆಯ ಶಂಕೆಯೂ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಭದ್ರಾವತಿ ಅಗ್ನಿಶಾಮಕ ದಳದ ಸಿಬ್ಬಂದಿ, ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಕಾರ್ಯಾಚರಣೆ ಆರಂಭಿಸಿದರು. ಬಳಿಕ ಟವರ್ ಏರಿ ಹಗ್ಗದ ಸಹಾಯದಿಂದ ಹರಸಾಹಸ ಪಟ್ಟು ಮೃತದೇಹವನ್ನು ಕೆಳಗಿಳಿಸಿದರು.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ (AFSO) ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೃಷ್ಣರಾಜು, ಆನಂದ್, ಸುರೇಶ್, ಮಹೇಂದ್ರ ಹಾಗೂ ಸಂತೋಷ್ ಪಾಲ್ಗೊಂಡಿದ್ದರು.
ವ್ಯಕ್ತಿಯ ಗುರುತು ಹಾಗೂ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
