ಕೋಟ್ಯಾಂತರ ರೂ ಮೌಲ್ಯದ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಯ ಹೆಸರಿಗೆ ಅಕ್ರಮ ದಾಖಲು ಆರೋಪ; ಐವರು ಅಧಿಕಾರಿಗಳ ವಿರುದ್ಧ FIR | Alleged illegal mutation of 192 acres and 3 guntas of government land in Balemaranahalli, Bhadravati. FIR registered against five land records department officials and staff.
ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಬಾಳೆಮಾರನಹಳ್ಳಿ ಗ್ರಾಮದ 192 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಯಾವುದೇ ಅಧಿಕೃತ ಮಂಜೂರಾತಿ ದಾಖಲೆಗಳಿಲ್ಲದೆ ಖಾಸಗಿ ವ್ಯಕ್ತಿಯ ಹೆಸರಿಗೆ ಅಕ್ರಮವಾಗಿ ಪೋಡಿ ದುರಸ್ತಿ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಭೂದಾಖಲೆಗಳ ಇಲಾಖೆಯ ಐವರು ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ವ್ಯಾಪ್ತಿಯಲ್ಲಿ ಒಟ್ಟು 237 ಎಕರೆ ಸರ್ಕಾರಿ ಜಮೀನಿದ್ದು, ಅದರಲ್ಲಿ 192 ಎಕರೆ 03 ಗುಂಟೆ ಜಮೀನನ್ನು ಪಾಲಾಕ್ಷಪ್ಪ ಬಿನ್ ನಂಜಪ್ಪ ಎಂಬುವವರ ಹೆಸರಿಗೆ ಅಕ್ರಮವಾಗಿ ಅಳತೆ ಮಾಡಿ ದಾಖಲೆ ಬದಲಾಯಿಸಲಾಗಿದೆ ಎಂಬುದು ದೂರಿನ ಪ್ರಮುಖ ಆರೋಪವಾಗಿದೆ. ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟಾಗಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭದ್ರಾವತಿಯ ಅಂದಿನ ಭೂದಾಖಲೆಗಳ ಸಹಾಯಕ ನಿರ್ದೇಶಕರಾಗಿದ್ದ ದೊಳ್ಳೇಗೌಡ ಅವರು ಈ ಪ್ರಕರಣದಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. 2025ರ ಜೂನ್ 17ರಂದು ನಾಗಮಂಗಲಕ್ಕೆ ವರ್ಗಾವಣೆಯಾಗಿದ್ದ ದಿನವೇ ಕಡತವನ್ನು ಭೂಮಾಪಕರ ಹಂಚಿಕೆ ಪಟ್ಟಿಗೆ ಕಳುಹಿಸಿದ್ದರು ಎನ್ನಲಾಗಿದೆ. ನಂತರ ಜೂನ್ 26ರಂದು ಪೋಡಿ ದುರಸ್ತಿಯನ್ನು ಅನುಮೋದಿಸಿ ಚೆಕ್ ರಿಜಿಸ್ಟರ್‌ನಲ್ಲಿ ದೃಢೀಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭೂಮಾಪಕ ಟಿ.ಹೆಚ್. ಲೋಹಿತ್ ಅವರು ತಂತ್ರಾಂಶದಲ್ಲಿ ಪ್ರಕರಣ ಅಧಿಕೃತವಾಗಿ ಸ್ವೀಕೃತವಾಗುವ ಮೊದಲೇ ಸ್ಥಳದಲ್ಲಿ ಅಳತೆ ನಡೆಸಿದ್ದರು ಎಂಬ ಆರೋಪವಿದೆ. ಈ ಅಳತೆಯ ಆಧಾರದ ಮೇಲೆ ಎಲ್.ಆರ್. ಟಿಪ್ಪಣಿ ಮತ್ತು ಇತರ ದಾಖಲೆಗಳನ್ನು ಸಿದ್ಧಪಡಿಸಲಾಗಿತ್ತು ಎನ್ನಲಾಗಿದೆ.
ಭೂಮಾಪಕಿ ರಮಾದೇವಿ ಅವರು ಪೋಡಿ ದುರಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿ ಅಂದಿನ ಪರ್ಯಾವೇಕ್ಷಕ ಯತೀಶ ಅವರಿಗೆ ಸಲ್ಲಿಸಿದ್ದರು. ಬಳಿಕ ಯತೀಶ ಅವರು ಕಡತವನ್ನು ಅನುಮೋದನೆಗಾಗಿ ದೊಳ್ಳೇಗೌಡ ಅವರಿಗೆ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೋಡಿ ದುರಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನಾಶಪಡಿಸಿರುವ ಆರೋಪವೂ ಕೇಳಿಬಂದಿದೆ. ಅಭಿಲೇಖಾಲಯದ ಭೂಮಾಪಕಿ ಹಾಗೂ ದಾಖಲೆಗಳ ಸುಪರ್ದುದಾರರಾಗಿದ್ದ ಮಮತಾ ಅವರು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸಂಬಂಧಪಟ್ಟ ಪೋಡಿ ದಾಖಲೆಗಳನ್ನು ನಾಶಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಸ್ತುತ ಅಭಿಲೇಖಾಲಯದಲ್ಲಿ ಚೆಕ್ ರಿಜಿಸ್ಟರ್ ಮಾತ್ರ ಲಭ್ಯವಿದ್ದು, ಉಳಿದ ಪೋಡಿ ದಾಖಲೆಗಳು ಲಭ್ಯವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ದೊಳ್ಳೇಗೌಡ, ಯತೀಶ, ಭೂಮಾಪಕ ಟಿ.ಹೆಚ್. ಲೋಹಿತ್, ಭೂಮಾಪಕಿ ರಮಾದೇವಿ ಹಾಗೂ ಅಭಿಲೇಖಾಲಯದ ಭೂಮಾಪಕಿ ಮಮತಾ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಬೆಂಗಳೂರು ವಿಭಾಗದ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕ ಎಸ್. ನಿಸಾರ್ ಅಹಮದ್ ಅವರು 2026ರ ನವೆಂಬರ್ 13ರಂದು ದೂರು ನೀಡಿದ್ದಾರೆ. ಮೊದಲಿಗೆ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ ಪ್ರಕರಣವನ್ನು ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ನವೆಂಬರ್ 17ರಂದು ಅಪರಾಧ ಸಂಖ್ಯೆ 122/2026ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
