ಮಧು ಬಂಗಾರಪ್ಪ ಹೇಳಿಕೆಗೆ ಹಾಲಪ್ಪ ತಿರುಗೇಟು: ‘ನಾನು ಪೇಯ್ಡ್ ಸರ್ವೆಂಟ್ ಅಲ್ಲ, ₹41 ಲಕ್ಷ ಸಾಲ ಕೊಟ್ಟಿದ್ದೆ!’ | BJP leader Haratalu Halappa responds to Minister Madhu Bangarappa’s remarks, claiming he was never a paid servant at S. Bangarappa’s house and had instead lent ₹41 lakh.
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಮನೆಯಲ್ಲಿ ತಾನು ಸಂಬಳ ಪಡೆದು ಕೆಲಸ ಮಾಡುವ ಕೆಲಸಗಾರನಾಗಿರಲಿಲ್ಲ. ಬದಲಾಗಿ, ತಾನೇ ಬಂಗಾರಪ್ಪ ಅವರಿಗೆ ₹41 ಲಕ್ಷ ಸಾಲ ನೀಡಿದ್ದೆ. ಸಮಾಜವಾದಿ ಪಕ್ಷಕ್ಕೆ ಸೇರಿದ ಬಳಿಕ ಸಚಿವ ಮಧು ಬಂಗಾರಪ್ಪ ಅವರೇ ಆ ಹಣವನ್ನು ಹಿಂದಿರುಗಿಸಿದ್ದರು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಸ್ಪಷ್ಟಪಡಿಸಿದ್ದಾರೆ.
‘ನಮ್ಮ ಮನೆಯಲ್ಲಿ ನೆಲ ಒರೆಸುವ ಕೆಲಸ ಮಾಡುತ್ತಿದ್ದ ಹಾಲಪ್ಪ ಅವರನ್ನು ಬಂಗಾರಪ್ಪ ಶಾಸಕರನ್ನಾಗಿ ಮಾಡಿದ್ದರು’ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಹರತಾಳು ಹಾಲಪ್ಪ, ಈ ಆರೋಪವನ್ನು ತಳ್ಳಿಹಾಕಿ ತಿರುಗೇಟು ನೀಡಿದರು.
ತಾನು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಅಭಿಮಾನಿಯಾಗಿ, ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿ ಅವರೊಂದಿಗೆ ಒಡನಾಟ ಹೊಂದಿದ್ದೆ. ಅವರಿಂದ ಎಂದಿಗೂ ಹಣ ಪಡೆದು ಕೆಲಸ ಮಾಡಿಲ್ಲ. ಕಾಲೇಜು ದಿನಗಳಿಂದಲೇ ಬಂಗಾರಪ್ಪ ಅವರ ಅಭಿಮಾನಿಯಾಗಿದ್ದೆ. 1985ರಲ್ಲಿ ಪದವಿ ಪೂರ್ಣಗೊಳಿಸುವ ವೇಳೆಗೆ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗಿದ್ದೆ. 1987ರಲ್ಲಿಯೇ ಸ್ವಂತವಾಗಿ ಮಾರುತಿ ಕಾರು ಖರೀದಿಸಿದ್ದೆ. ಬಂಗಾರಪ್ಪ ಅವರಿಂದ ಯಾವುದೇ ಹಣಕಾಸಿನ ನೆರವು ಅಥವಾ ವೈಯಕ್ತಿಕ ಅನುಕೂಲ ಪಡೆದಿಲ್ಲ ಎಂದು ಹೇಳಿದರು.
ಕೂಲಿ ಕೆಲಸದಿಂದ ರಾಜಕೀಯದವರೆಗೆ:
ನಾವು ಮುಳುಗಡೆ ಸಂತ್ರಸ್ತರು. ಆರಂಭದಲ್ಲಿ ಉಪ್ಪಳ್ಳಿಯ ಗಣೇಶರಾಯರ ಮನೆಯಲ್ಲಿ ಕೂಲಿ ಕೆಲಸ ಮಾಡಿದ್ದೆ. ಕಾಲೇಜಿಗೆ ಹೋಗುವ ಸಂದರ್ಭದಲ್ಲಿಯೂ ಕೆಲಸ ಮಾಡುತ್ತಿದ್ದೆ. ಆಗ ದಿನಕ್ಕೆ ₹3 ಕೂಲಿ ಪಡೆಯುತ್ತಿದ್ದೆ. ಬಂಗಾರಪ್ಪ ಅವರ ನ್ಯಾಯಾಲಯದ ಪ್ರಕರಣಗಳ ಸಂದರ್ಭದಲ್ಲಿಯೂ ಹಲವು ಬಾರಿ ಅವರೊಂದಿಗೆ ತೆರಳಿದ್ದೆ. ವರ್ಷಗಟ್ಟಲೆ ಪ್ರಕರಣಗಳಿಗಾಗಿ ಓಡಾಡಿದ್ದೇನೆ. ಆದರೆ, ಸಚಿವ ಮಧು ಬಂಗಾರಪ್ಪ ಅವರು ಎಷ್ಟು ಬಾರಿ ನ್ಯಾಯಾಲಯಕ್ಕೆ ಬಂದಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು.
ತಮ್ಮ ವಿರುದ್ಧದ ಪ್ರಕರಣವೊಂದರಲ್ಲಿ ದೂರುದಾರರಿಗೆ ಬಂಗಾರಪ್ಪ ಅವರ ಮನೆಯಿಂದ 192 ಬಾರಿ ಕರೆ ಮಾಡಿರುವ ದಾಖಲೆಗಳಿವೆ ಎಂದೂ ಅವರು ಉಲ್ಲೇಖಿಸಿದರು.
ಬಂಗಾರಪ್ಪ ಅವರ ಜನ್ಮದಿನವನ್ನು ಪ್ರತಿವರ್ಷ ಸ್ನೇಹಿತರೊಂದಿಗೆ ಆಚರಿಸುತ್ತಿದ್ದು, ಹಲವು ವರ್ಷಗಳ ಹಿಂದಿನ ಛಾಯಾಚಿತ್ರಗಳೇ ಇದಕ್ಕೆ ಸಾಕ್ಷಿಯಾಗಿವೆ. ರಾಜಕೀಯವಾಗಿ ಬೇರೆ ಪಕ್ಷದಲ್ಲಿದ್ದರೂ ಬಂಗಾರಪ್ಪ ಅವರ ಮೇಲಿನ ಅಭಿಮಾನ ಮತ್ತು ಗೌರವ ಕಡಿಮೆಯಾಗಿಲ್ಲ. ಅವರ ಬಗ್ಗೆ ಗೌರವ ಹೊಂದಿರುವುದನ್ನು ಯಾರಿಂದಲೂ ಕಲಿಯಬೇಕಿಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಸಂಸ್ಕಾರವಂತ ರಾಜಕಾರಣಿಯಾಗಿದ್ದರು. ಅದೇ ರೀತಿ, ಯಡಿಯೂರಪ್ಪ ಅವರ ಮಕ್ಕಳು ಸಂಘ ಪರಿವಾರದ ಸಂಪರ್ಕದಿಂದ ಸಂಸ್ಕಾರ ಬೆಳೆಸಿಕೊಂಡಿದ್ದಾರೆ. ಆದರೆ, ಸಚಿವ ಮಧು ಬಂಗಾರಪ್ಪ ಅವರಿಗೆ ಈ ಎರಡೂ ಗುಣಗಳಿಲ್ಲ ಎಂದು ಹರತಾಳು ಹಾಲಪ್ಪ ಟೀಕಿಸಿದರು.
ಜಿಲ್ಲೆಯಲ್ಲಿ ಇದೀಗ ಅಭಿವೃದ್ಧಿಗೆ ಆದ್ಯತೆ ನೀಡಬೇಕಾದ ಸಮಯ ಬಂದಿದೆ. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ ಹೋರಾಟದ ರಾಜಕಾರಣಕ್ಕೆ ಮಹತ್ವವಿತ್ತು. ಯಡಿಯೂರಪ್ಪ ಅವರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯಿತು. ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರು ಜವಾಬ್ದಾರಿಯಿಂದ ಮಾತನಾಡಬೇಕು. ವೈಯಕ್ತಿಕ ಟೀಕೆಗಳನ್ನು ಬದಿಗಿಟ್ಟು ಜಿಲ್ಲೆಯ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಶಾಂತ್ ಕುಗ್ವೆ, ದರ್ಶನ್, ಪೆರುಮಾಳ್, ರವಿಕುಮಾರ್, ಕೇಶವ್, ಅರುಣ್ ಕುಗ್ವೆ, ಚಂದ್ರಶೇಖರ್, ಶರತ್ ಕಲ್ಯಾಣಿ ಹಾಗೂ ದಿನೇಶ್ ಆಚಾರ್ಯ ಉಪಸ್ಥಿತರಿದ್ದರು.
