ಶಿವಮೊಗ್ಗದ ಅಣ್ಣಾನಗರ ಕೊಲೆ ಪ್ರಕರಣ: ಮಾರಕಾಸ್ತ್ರ, ಬೈಕ್ ಸಮೇತ ಆರೋಪಿ ಬಂಧನ | Shivamogga police have arrested Syed Jilan in connection with the murder of Mohammed Ali on Anna Nagar Channel Eri Road and seized a weapon and motorcycle.
ಶಿವಮೊಗ್ಗ: ನಗರದ ಅಣ್ಣಾನಗರ ಚಾನೆಲ್ ಏರಿ ರಸ್ತೆಯಲ್ಲಿ ನಡೆದಿದ್ದ ಮೊಹಮದ್ ಅಲಿ (37) ಕೊಲೆ ಪ್ರಕರಣವನ್ನು ದೊಡ್ಡಪೇಟೆ ಠಾಣೆ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯ್ಯದ್ ಜಿಲಾನ್ (23) ಎಂಬಾತನನ್ನು ಬಂಧಿಸಿದ್ದಾರೆ.
ಅಕ್ಟೋಬರ್ 3ರ ರಾತ್ರಿ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾನಗರ ಚಾನೆಲ್ ಏರಿ ರಸ್ತೆಯಲ್ಲಿ ಮೊಹಮದ್ ಅಲಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ರಸ್ತೆ ಬದಿಯಲ್ಲಿ ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 2023ರ ಕಲಂ 103(1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಕ್ಟೋಬರ್ 5ರಂದು ಸೈಯ್ಯದ್ ಜಿಲಾನ್ (23) ಎಂಬಾತನನ್ನು ಬಂಧಿಸಿದ್ದಾರೆ. ಶಿವಮೊಗ್ಗ ನಗರದ ಅಶೋಕನಗರ 3ನೇ ಕ್ರಾಸ್ ನಿವಾಸಿಯಾಗಿರುವ ಜಿಲಾನ್ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಮೊಹಮದ್ ಅಲಿ ಅವರ ಕೊಲೆಯಲ್ಲಿ ಈತನ ಪಾತ್ರ ಇರುವುದು ಪತ್ತೆಯಾಗಿದೆ.
ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
