ದರ್ಶನ್ ದರ್ಶನದ ಆಸೆ ಈಡೇರಿತು, ಬದುಕಿನ ಪಯಣ ಮುಗಿಯಿತು: ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದ ಸುದೀಪ್ ಇನ್ನಿಲ್ಲ
2023ರಲ್ಲಿ ‘ಪೋಸ್ಟ್ ಮ್ಯಾನ್ ನ್ಯೂಸ್’ ವರದಿ ಬಳಿಕ ನೆರವಿಗೆ ಬಂದಿದ್ದ ನಟ ದರ್ಶನ್
Malenadu youth Sudeep, a die-hard Darshan fan from Mattikoppa, passed away on September 21, 2026. His long-held dream of meeting actor Darshan was fulfilled after a Postman News report in 2023.
ಹೊಸನಗರ: ನೆಚ್ಚಿನ ನಟನನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂಬ ಕನಸನ್ನು ಹೊತ್ತು ಬದುಕಿದ್ದ ಮಲೆನಾಡಿನ ಯುವಕನೊಬ್ಬ ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕೊಪ್ಪ ಗ್ರಾಮದ 24 ವರ್ಷದ ಸುದೀಪ್ ಅವರು ಸೆಪ್ಟೆಂಬರ್ 21ರಂದು ಮೂರ್ಛೆರೋಗದ ಹಿನ್ನೆಲೆಯಲ್ಲಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಡ ಕೂಲಿ ಕಾರ್ಮಿಕರಾದ ಹಿರಿಯಣ್ಣ ಹಾಗೂ ತಾರಾ ದಂಪತಿಯ ದ್ವಿತೀಯ ಪುತ್ರನಾಗಿದ್ದ ಸುದೀಪ್, ಆರನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದಲೇ ನಟ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ನೆಚ್ಚಿನ ನಟನನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂಬುದು ಅವರ ಬಹುದಿನಗಳ ಕನಸಾಗಿತ್ತು.
ದರ್ಶನ್‌ರನ್ನು ಭೇಟಿಯಾಗುವ ಆಸೆಯಿಂದ ಹಲವು ಬಾರಿ ಮನೆಯವರಿಗೂ ತಿಳಿಸದೆ ಬೆಂಗಳೂರಿನ ತೂಗುದೀಪ ನಿವಾಸಕ್ಕೆ ತೆರಳಿದ್ದ ಸುದೀಪ್, ಭದ್ರತಾ ಸಿಬ್ಬಂದಿಯಿಂದ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ನಿರಾಸೆಯಿಂದ ಹಿಂದಿರುಗಿದ್ದರು.
ಈ ನಡುವೆ ಅವರ ಆರೋಗ್ಯದಲ್ಲಿಯೂ ಏರುಪೇರು ಕಂಡುಬಂದಿದ್ದು, ಕುಟುಂಬದವರು ಮಣಿಪಾಲ, ಮಂಗಳೂರು ವೆನ್‌ಲಾಕ್ ಹಾಗೂ ಶಿವಮೊಗ್ಗದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು.“ಸಾಯುವ ಮುನ್ನ ಒಮ್ಮೆಯಾದರೂ ದರ್ಶನ್‌ರನ್ನು ನೋಡಬೇಕು” ಎಂಬುದು ಸುದೀಪ್ ಅವರ ಬಹುದಿನಗಳ ಆಸೆಯಾಗಿತ್ತು.
‘ಪೋಸ್ಟ್ ಮ್ಯಾನ್ ನ್ಯೂಸ್’ ವರದಿಯಿಂದ ಈಡೇರಿದ ಕನಸು
2023ರ ಜೂನ್‌ನಲ್ಲಿ ಸುದೀಪ್ ಅವರ ಅಭಿಮಾನ ಹಾಗೂ ಕುಟುಂಬದ ಸಂಕಷ್ಟದ ಕುರಿತು ‘ಪೋಸ್ಟ್ ಮ್ಯಾನ್ ನ್ಯೂಸ್’ ವರದಿ ಮಾಡಿತ್ತು. ಹುಂಚ ಸಮೀಪದ ಕುಬಟಹಳ್ಳಿಯಲ್ಲಿದ್ದ ಸುದೀಪ್ ಅವರ ಅತ್ತೆ ಮನೆಯವರನ್ನು ಸಂಪರ್ಕಿಸಿ, ಅವರ ಕುಟುಂಬದ ನೋವು ಹಾಗೂ ದರ್ಶನ್‌ರನ್ನು ಭೇಟಿಯಾಗಬೇಕೆಂಬ ಸುದೀಪ್ ಅವರ ಆಸೆಯನ್ನು ವರದಿ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿತ್ತು.
ವರದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ನಟ ದರ್ಶನ್ ಅವರು ಸುದೀಪ್ ಅವರ ಬಗ್ಗೆ ಮಾಹಿತಿ ಪಡೆದುಕೊಂಡು ಸ್ಪಂದಿಸಿದ್ದರು. ‘ಪೋಸ್ಟ್ ಮ್ಯಾನ್ ನ್ಯೂಸ್’ ಸಂಪಾದಕ ರಫಿ ರಿಪ್ಪನ್‌ಪೇಟೆ ಹಾಗೂ ಶಿವಮೊಗ್ಗ ಜಿಲ್ಲಾ ಡಿ-ಬಾಸ್ ಅಭಿಮಾನಿ ಬಳಗದ ಅಧ್ಯಕ್ಷರನ್ನು ಸಂಪರ್ಕಿಸಿದ್ದ ದರ್ಶನ್, ಸುದೀಪ್ ಅವರನ್ನು ಮೈಸೂರಿಗೆ ಕರೆತರುವಂತೆ ತಿಳಿಸಿದ್ದರು.
ಮೈಸೂರಿನಲ್ಲಿ ಸುದೀಪ್ ಅವರು ತಮ್ಮ ನೆಚ್ಚಿನ ನಟ ದರ್ಶನ್‌ರನ್ನು ಭೇಟಿಯಾಗಿದ್ದರು. ದರ್ಶನ್ ಅವರೊಂದಿಗೆ ಕೆಲಕಾಲ ಕಳೆದ ಸುದೀಪ್, ಅವರಿಂದ ಧೈರ್ಯದ ಮಾತುಗಳನ್ನು ಕೇಳಿ ಸಂತಸಗೊಂಡಿದ್ದರು. ಹಲವು ವರ್ಷಗಳಿಂದ ಕಾಡುತ್ತಿದ್ದ ತಮ್ಮ ಕನಸು ನನಸಾದ ಕ್ಷಣ ಸುದೀಪ್ ಪಾಲಿಗೆ ಅವಿಸ್ಮರಣೀಯವಾಗಿತ್ತು.
ಈ ಭೇಟಿಗೆ ‘ಪೋಸ್ಟ್ ಮ್ಯಾನ್ ನ್ಯೂಸ್’ ಸಂಪಾದಕ ರಫಿ ರಿಪ್ಪನ್‌ಪೇಟೆ, ಡಿ-ಬಾಸ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ನಾಗೇಶ್ ಹೊಳೆಹೊನ್ನೂರು, ಹಿರಿಯ ಪತ್ರಕರ್ತ ಬಸವರಾಜ್ ಕೆ.ಎಂ., ಲೋಹಿತ್ ಬುಕ್ಕಿವರೆ, ಯಶಸ್ಪತಿ ಜೈನ್, ಲೋಕೇಶ್ ಹೊಳೆ ಬೆನವಳ್ಳಿ ಸೇರಿದಂತೆ ಹಲವರು ಸಾಕ್ಷಿಯಾಗಿದ್ದರು.
ಆದರೆ, ನೆಚ್ಚಿನ ನಟನನ್ನು ಭೇಟಿಯಾದ ತೃಪ್ತಿಯೊಂದಿಗೆ ಹೊಸ ಜೀವನದ ಭರವಸೆ ಕಂಡಿದ್ದ ಸುದೀಪ್ ಇದೀಗ ಇನ್ನಿಲ್ಲ ಎಂಬ ಸುದ್ದಿ ಕುಟುಂಬಸ್ಥರು ಹಾಗೂ ಅವರ ಪರಿಚಯಸ್ಥರಲ್ಲಿ ದುಃಖ ಮೂಡಿಸಿದೆ.
ತಮ್ಮ ಬಹುದಿನಗಳ ಆಸೆಯಂತೆ ನೆಚ್ಚಿನ ನಟನನ್ನು ಕಣ್ತುಂಬಿಕೊಂಡು ಭೇಟಿಯಾಗುವ ಅವಕಾಶ ಸುದೀಪ್ ಅವರಿಗೆ ದೊರೆತಿದ್ದು, ಇದೀಗ ಅವರ ಕುಟುಂಬ ಹಾಗೂ ಅಭಿಮಾನಿಗಳ ಪಾಲಿಗೆ ಆ ನೆನಪೇ ಶಾಶ್ವತವಾಗಿ ಉಳಿದಿದೆ.
ಸುದೀಪ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ‘ಪೋಸ್ಟ್ ಮ್ಯಾನ್ ನ್ಯೂಸ್’ ಬಳಗ ಸಂತಾಪ ಸೂಚಿಸಿದೆ.