ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ
A fire caused by a suspected short circuit damaged construction worker Sanjeev’s house in Koduru, Hosanagara taluk. The Sri Ramalingeshwara Construction Workers Association provided financial assistance to the affected family.
ರಿಪ್ಪನ್ ಪೇಟೆ : ಕೋಡೂರು ಗ್ರಾಮದ ಬಡ ಕಟ್ಟಡ ಕಾರ್ಮಿಕ ಸಂಜೀವ (ಗಾರೆ ಸಂಜು) ಅವರ ಬದುಕು ಮಂಗಳವಾರ ರಾತ್ರಿ ಕ್ಷಣಮಾತ್ರದಲ್ಲಿ ಅಗ್ನಿಗಾಹುತಿಯಾಗಿದೆ. ಕಷ್ಟಪಟ್ಟು ಕಟ್ಟಿದ್ದ ಸೂರು ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಸಂಕಷ್ಟದ ಸಮಯದಲ್ಲಿ ‘ಶ್ರೀ ರಾಮಲಿಂಗೇಶ್ವರ ಕಟ್ಟಡ ಕಾರ್ಮಿಕರ ಸಂಘ’ ನೊಂದ ಜೀವಕ್ಕೆ ಆಸರೆಯಾಗಿ ನಿಂತು ಅತ್ಯುತ್ತಮ ಮಾನವೀಯತೆ ಮೆರೆದಿದೆ.
ಕುಟುಂಬವು ಗಣೇಶೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ, ಕೀಳಂಬಿ ರಸ್ತೆಯಲ್ಲಿರುವ ಇವರ ಸ್ಲ್ಯಾಬ್ ಮನೆಯಲ್ಲಿ ರಾತ್ರಿ ಸುಮಾರು 8 ಗಂಟೆಗೆ ಈ ದುರಂತ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿದೆಯಾದರೂ, ಬೆಂಕಿಯ ತೀವ್ರತೆಗೆ ಮನೆಯೊಳಗಿದ್ದ ವಸ್ತುಗಳು ಹಾಗೂ ಕಟ್ಟಡ ಸಂಪೂರ್ಣವಾಗಿ ಹಾನಿಗೀಡಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಸರ್ವಸ್ವವನ್ನೂ ಕಳೆದುಕೊಂಡು ದಿಕ್ಕುತೋಚದೆ ಕಣ್ಣೀರಿಡುತ್ತಿದ್ದ ಸಂಜೀವ್ ಅವರ ಬಳಿಗೆ ಶ್ರೀ ರಾಮಲಿಂಗೇಶ್ವರ ಕಟ್ಟಡ ಕಾರ್ಮಿಕರ ಸಂಘದ ಹೊಸನಗರ ತಾಲೂಕು ಘಟಕದ ಪದಾಧಿಕಾರಿಗಳು ತಕ್ಷಣವೇ ಧಾವಿಸಿದರು. ಸಂಕಷ್ಟದಲ್ಲಿದ್ದ ತಮ್ಮ ಕಾರ್ಮಿಕ ಸಹೋದರನಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರಲ್ಲದೆ, ಸ್ಥಳದಲ್ಲೇ ಆರ್ಥಿಕ ನೆರವು ಹಸ್ತಾಂತರಿಸಿದರು. ಕಷ್ಟದ ಸಮಯದಲ್ಲಿ ಸಂಘವು ತೋರಿದ ಈ ಪ್ರಾಮಾಣಿಕ ಕಾಳಜಿ ಹಾಗೂ ನೆರವಿಗೆ ಬಡ ಕಾರ್ಮಿಕ ಸಂಜೀವ್ ಭಾವುಕರಾಗಿ ಕಣ್ಣೀರಿಟ್ಟ ಘಟನೆ ನೆರೆದವರ ಮನಕಲಕುವಂತಿತ್ತು.
ಈ ಅರ್ಥಪೂರ್ಣ ಹಾಗೂ ಮಾನವೀಯ ಕಾರ್ಯದಲ್ಲಿ ಸಂಘದ ಅಧ್ಯಕ್ಷರಾದ ಶೌಕತ್ ಆಲಿ (ರಿಪ್ಪನ್ಪೇಟೆ), ಪ್ರಧಾನ ಕಾರ್ಯದರ್ಶಿ ರಮೇಶ್ ಬಿ.ಆರ್., ಪದಾಧಿಕಾರಿಗಳಾದ ಜಗದೀಶ್, ಜಬಿ ಉಲ್ಲಾ ಹಾಗೂ ಕೋಡೂರು ಭಾಗದ ಪದಾಧಿಕಾರಿ ಪ್ರಕಾಶ್ ಉಪಸ್ಥಿತರಿದ್ದು, ನೊಂದ ಜೀವಕ್ಕೆ ಬೆನ್ನೆಲುಬಾಗಿ ನಿಂತರು.
