ಹಿಟ್ ಅಂಡ್ ರನ್; ಬೈಕ್ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು
Young woman Archana Jain dies in a hit-and-run accident after a sand tipper hits her bike in Nellijbeedu, Sagara taluk, Shivamogga.
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನೆಲ್ಲಿಬೀಡು ಸಮೀಪ ಮರಳು ಸಾಗಿಸುತ್ತಿದ್ದ ಟಿಪ್ಪರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮಳೂರು ಗ್ರಾಮದ ಅರ್ಚನಾ ಜೈನ್ (ಯುವತಿ) ಮೃತಪಟ್ಟವರು. ಅಪಘಾತದಲ್ಲಿ ಅವರ ತಂದೆ ನೀಲಕುಮಾರ್ ಜೈನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರ್ಚನಾ ಅವರು ಉಡುಪಿಯಲ್ಲಿ ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇಂದು ಊರಿನಿಂದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತಂದೆ ನೀಲಕುಮಾರ್ ಜೈನ್ ಅವರು ಮಗಳನ್ನು ಬಸ್ಗೆ ಬಿಟ್ಟು ಬರಲು ಬೈಕ್ನಲ್ಲಿ ತೆರಳುತ್ತಿದ್ದಾಗ ಮರಳು ಸಾಗಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ಅರ್ಚನಾ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಪಘಾತಕ್ಕೆ ಕಾರಣವಾದ ಟಿಪ್ಪರ್ KA 15 7918 ನೋಂದಣಿ ಸಂಖ್ಯೆಯನ್ನು ಹೊಂದಿದೆ.
ನೆಲ್ಲಿಬೀಡು ಭಾಗದಲ್ಲಿ ಮರಳು ಸಾಗಿಸುವ ಟಿಪ್ಪರ್ಗಳ ಸಂಚಾರದಿಂದ ಸಾರ್ವಜನಿಕರಿಗೆ ತೊಂದರೆ ಹಾಗೂ ಅಪಾಯ ಎದುರಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಕ್ರಮ ಮರಳು ದಂಧೆ ಮತ್ತು ನಿಯಂತ್ರಣವಿಲ್ಲದ ಮರಳು ಸಾಗಾಟದಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಟಿಪ್ಪರ್ ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.