w
Headlines
Home » ಸಿಗಂದೂರಿನಲ್ಲಿ ಮೊಳಗಿದ ಕಸಾಪ ಬದಲಾವಣೆಯ ಧ್ವನಿ: ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯಗೆ ಒಮ್ಮತದ ಬೆಂಬಲ

ಸಿಗಂದೂರಿನಲ್ಲಿ ಮೊಳಗಿದ ಕಸಾಪ ಬದಲಾವಣೆಯ ಧ್ವನಿ: ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯಗೆ ಒಮ್ಮತದ ಬೆಂಬಲ

IMG 20261025 WA0016

ಸಿಗಂದೂರಿನಲ್ಲಿ ಮೊಳಗಿದ ಕಸಾಪ ಬದಲಾವಣೆಯ ಧ್ವನಿ: ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯಗೆ ಒಮ್ಮತದ ಬೆಂಬಲ |Writers and Kannada activists call for reviving the original ideals of Kannada Sahitya Parishat and back Janagere Venkataramaiah as a consensus candidate for the central president post at a meeting in Sigandur, Shivamogga.

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತು ಅಧಿಕಾರದ ಅಹಮಿಕೆಯ ಕೇಂದ್ರವಾಗದೆ, ಕನ್ನಡಪರ ಹೋರಾಟಗಾರರ ವೇದಿಕೆಯಾಗಬೇಕು. ಪರಿಷತ್ತಿನ ಮೂಲ ಆಶಯಗಳನ್ನು ಪುನರುತ್ಥಾನಗೊಳಿಸಲು ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಬೆಂಬಲಿಸಿ ಗೆಲ್ಲಿಸಬೇಕು ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಕರೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಶ್ರೀಕ್ಷೇತ್ರ ಸಿಗಂದೂರಿನ ಚೌಡೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ‘ಕಸಾಪ ಮುಂದೇನು? ಮಾತು–ಮಂಥನ’ ಜಿಲ್ಲಾ ಮಟ್ಟದ ಸಾಹಿತಿ–ಕಲಾವಿದರ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅಧಿಕಾರಶಾಹಿಯಿಂದ ಕಸಾಪ ಮುಕ್ತವಾಗಲಿ
ಮಹಾರಾಜರು ಜನಸಾಮಾನ್ಯರು ಮತ್ತು ಆಳುವವರ ನಡುವಿನ ಸೇತುವೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸಬೇಕು ಎಂಬ ದೂರದೃಷ್ಟಿಯಿಂದ ಸಂಸ್ಥೆಯನ್ನು ಸ್ಥಾಪಿಸಿದ್ದರು. ಆದರೆ ಇಂದು ಪರಿಷತ್ತಿನ ಮೂಲ ಆಶಯಗಳು ಮಸುಕಾಗುತ್ತಿದ್ದು, ಅಧಿಕಾರಶಾಹಿ ಮನೋಭಾವ ಹೆಚ್ಚಾಗಿರುವುದು ಆತಂಕಕಾರಿ ಸಂಗತಿ ಎಂದು ಜಯಪ್ರಕಾಶ್ ಗೌಡ ಅಭಿಪ್ರಾಯಪಟ್ಟರು.

ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ನಿವೃತ್ತಿಯ ನಂತರ ಪರಿಷತ್ತಿನ ಚುಕ್ಕಾಣಿ ಹಿಡಿಯುವ ಪ್ರವೃತ್ತಿ ಸಂಸ್ಥೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತಿದೆ. ಕನ್ನಡದ ನೆಲದಲ್ಲಿ ಬೆಳೆದು, ಕನ್ನಡಕ್ಕಾಗಿ ದುಡಿದು, ಸಾಹಿತ್ಯ ಹಾಗೂ ಸಂಘಟನೆಯ ಮೂಲಕ ಜನರೊಂದಿಗೆ ಬೆರೆತವರ ಕೈಗೆ ಪರಿಷತ್ತಿನ ಆಡಳಿತ ಮರಳಬೇಕು. ಈ ಹಿನ್ನೆಲೆಯಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅವರನ್ನು ಗುರಿಯಾಗಿಸಿಕೊಂಡು ನಡೆದ ಬೆಳವಣಿಗೆಗಳ ವಿರುದ್ಧ ಆರಂಭವಾದ ಹೋರಾಟ ಮಹತ್ವದ ಘಟ್ಟ ತಲುಪಿದೆ. ಕೇಂದ್ರದ ಹಿಂದಿನ ಅಧ್ಯಕ್ಷರ ವಿರುದ್ಧ 256 ಪುಟಗಳ ವಿಚಾರಣಾ ಕೈಪಿಡಿ ಪ್ರಕಟವಾಗಿದ್ದು, ನ್ಯಾಯಾಲಯದ ಅಂತಿಮ ತೀರ್ಪಿನ ಹಂತದವರೆಗೆ ವಿಚಾರಣೆ ಸಾಗಿದೆ ಎಂದು ಅವರು ಹೇಳಿದರು.

ಪರಿಷತ್ತಿನ ಹಿಂದಿನ ಅಧ್ಯಕ್ಷರು ತಮ್ಮ ವಿರುದ್ಧ ಮಾತನಾಡುವವರನ್ನು ವಕೀಲರ ನೋಟಿಸ್ ಮೂಲಕ ಬೆದರಿಸಲು ಸಂಸ್ಥೆಯ ₹29 ಲಕ್ಷ ಹಣವನ್ನು ಬಳಸಿದ್ದಾರೆ ಎಂಬ ಆರೋಪವನ್ನೂ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಪನ್ಮೂಲಗಳು ಕನ್ನಡದ ಕೆಲಸಕ್ಕೆ ಬಳಕೆಯಾಗಬೇಕೇ ಹೊರತು ವೈಯಕ್ತಿಕ ಪ್ರತಿಷ್ಠೆಯ ಸಂಘರ್ಷಗಳಿಗೆ ಅಲ್ಲ. ಕಸಾಪ ಅಧಿಕಾರದ ಮಹಲಲ್ಲ, ಕನ್ನಡಿಗರ ಆತ್ಮಗೌರವದ ಸಂಕೇತವಾಗಬೇಕು ಎಂದು ಪ್ರತಿಪಾದಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ಹಲವು ಗೊಂದಲ: ಜಾಣಗೆರೆ ವೆಂಕಟರಾಮಯ್ಯ

ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಷತ್ತಿನ ಸದಸ್ಯರನ್ನು ಸಂಪರ್ಕಿಸಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿದ್ದು, ಅಧಿಕಾರಶಾಹಿ ಮನೋಭಾವ ಮತ್ತು ಆಡಳಿತದ ಅಹಮಿಕೆ ಇದಕ್ಕೆ ಕಾರಣ ಎಂದು ಆರೋಪಿಸಿದರು.

ನಿವೃತ್ತ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ಹಣಬಲ ಹಾಗೂ ಆಮಿಷಗಳ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ತಮಗೆ ಅನುಕೂಲವಾಗುವಂತೆ ಸಭೆಗಳನ್ನು ನಡೆಸಿ, ಬೈಲಾ ತಿದ್ದುಪಡಿ ಮಾಡಿಕೊಂಡು ಸರ್ವಾಧಿಕಾರಿ ಧೋರಣೆಯಲ್ಲಿ ಆಡಳಿತ ನಡೆಸಿದ್ದಾರೆ ಎಂದು ದೂರಿದರು.

ಹಾವೇರಿ ಮತ್ತು ಮಂಡ್ಯ ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಅವಮಾನಕರ ಹಾಗೂ ಗೊಂದಲಮಯ ಬೆಳವಣಿಗೆಗಳು ನಡೆದಿದ್ದವು. ಸಿಬ್ಬಂದಿಯ ಮೇಲಿನ ಶೋಷಣೆ, ಆಡಳಿತದಲ್ಲಿನ ಏಕಪಕ್ಷೀಯ ಧೋರಣೆ ಮತ್ತು ಭಿನ್ನಾಭಿಪ್ರಾಯಗಳಿಗೆ ಗೌರವ ನೀಡದ ಪ್ರವೃತ್ತಿ ಪರಿಷತ್ತಿನ ಘನತೆಗೆ ಧಕ್ಕೆ ತಂದಿವೆ ಎಂದು ಆರೋಪಿಸಿದರು.

ಕೋಟಿಗಟ್ಟಲೆ ಹಣ ಖರ್ಚು ಮಾಡಿ ಪ್ರಚಾರಕ್ಕೆ ಇಳಿಯುತ್ತಿರುವ ನಿವೃತ್ತ ಐಎಎಸ್ ಅಧಿಕಾರಿಗಳು, ಕಸಾಪದಲ್ಲಿ ನಡೆದಿವೆ ಎನ್ನಲಾದ ಅವ್ಯವಹಾರಗಳ ಕುರಿತು ಧ್ವನಿ ಎತ್ತಲಿಲ್ಲ ಎಂದು ಜಾಣಗೆರೆ ವೆಂಕಟರಾಮಯ್ಯ ಟೀಕಿಸಿದರು.

ಹಿಂದಿನ ಅಧ್ಯಕ್ಷರ ವಿರುದ್ಧದ ಆರೋಪಗಳನ್ನು ಪ್ರಶ್ನಿಸುವ ಬದಲು, ಅವುಗಳನ್ನು ಮುಚ್ಚಿಹಾಕಲು ನಿವೃತ್ತ ಅಧಿಕಾರಿಗಳು ಒಂದಾಗಿದ್ದಾರೆ ಎಂದು ಆರೋಪಿಸಿದ ಅವರು, ಹಣದ ಬಲದಿಂದ ಅಧಿಕಾರ ಹಿಡಿದು, ಅಧಿಕಾರವನ್ನು ಬಳಸಿಕೊಂಡು ಮತ್ತಷ್ಟು ಹಣ ಗಳಿಸುವುದೇ ಅವರ ತಂತ್ರಗಾರಿಕೆ ಎಂದು ದೂರಿದರು.
ಅಧಿಕಾರದ ಅಹಮಿಕೆ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಮುಕ್ತಗೊಳಿಸಲು ನನಗೆ ಮತ ನೀಡಿ ಬೆಂಬಲಿಸಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿದರು.

ಸಾಹಿತ್ಯ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಸಿಗಂದೂರು ಕ್ಷೇತ್ರದ ಬೆಂಬಲ

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ. ಎಚ್. ರಾಮಪ್ಪ ಮಾತನಾಡಿ, ಸಾಹಿತ್ಯ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಕ್ಷೇತ್ರವು ಸದಾ ಬೆಂಬಲ ನೀಡುತ್ತ ಬಂದಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ನವೆಂಬರ್ ಕೊನೆಯ ವಾರದಲ್ಲಿ ತಮ್ಮ ಅಧ್ಯಕ್ಷ ಅವಧಿ ಪೂರ್ಣಗೊಳ್ಳಲಿದ್ದು, ಅವಧಿಯ ಕೊನೆಯ ದಿನದವರೆಗೂ ರಾಜ್ಯೋತ್ಸವ ಸಪ್ತಾಹವನ್ನು ಆಯೋಜಿಸುವ ಆಶಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿ.ಟಿ. ಸ್ವಾಮಿ, ಪರಮೇಶ್ವರ ಕರೂರು, ಡಾ. ಶಾಂತರಾಮಪ್ರಭು, ಮಹಾದೇವಿ, ಟಿ.ಕೆ. ರಮೇಶ್ ಶೆಟ್ಟಿ, ಎಂ. ಪರಮೇಶ್, ಸತ್ಯನಾರಾಯಣ ಸಿರಿವಂತೆ, ಶಂಕರ್ ಶೇಟ್, ಷಣ್ಮುಖಾಚಾರ್, ನಾಗರಕೋಡಿಗೆ ಗಣೇಶಮೂರ್ತಿ, ಎಂ.ಆರ್. ರೇವಣಪ್ಪ, ಪ್ರಜ್ವಲ್, ಸುಧಾಮಣಿ, ಸದಾನಂದ ಶರ್ಮ, ನರಸಿಂಹಸ್ವಾಮಿ, ರೇವಣಪ್ಪ, ಶ್ರೀಪತಿ ಹಳಗುಂದ, ಜಿ.ವಿ. ಸಂಗಮೇಶ್ವರ, ನೆಂಪೆ ದೇವರಾಜ್, ಅಕ್ಷತಾ ಹುಂಚದಕಟ್ಟೆ, ವಿಜಯಾದೇವಿ, ಬಿ. ಚಂದ್ರೇಗೌಡ ಸೇರಿದಂತೆ ಹಲವು ಸಾಹಿತಿಗಳು, ಕಲಾವಿದರು ಹಾಗೂ ಕನ್ನಡಪರ ಸಂಘಟಕರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.