ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು

Ripponpete: Akhila Karnataka Building Workers Organization district president Sunder Babu said allegations against the organization are baseless and denied claims of excess charges for labour cards.

ರಿಪ್ಪನ್‌ಪೇಟೆ: ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳನ್ನು ಯಾವುದೇ ಅಡೆತಡೆಯಿಲ್ಲದೆ ಮತ್ತು ಪ್ರಾಮಾಣಿಕವಾಗಿ ತಲುಪಿಸುವ ಏಕೈಕ ಗುರಿ ಹೊಂದಿರುವ ನಮ್ಮ ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘಟನೆಯ ವಿರುದ್ಧ ಇತ್ತೀಚೆಗೆ ಕೇಳಿಬಂದಿರುವ ಎಲ್ಲಾ ಆರೋಪಗಳು ಸಂಪೂರ್ಣವಾಗಿ ನಿರಾಧಾರ ಹಾಗೂ ಸತ್ಯಕ್ಕೆ ದೂರವಾದವು ಎಂದು ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಸುಂದರ್ ಬಾಬು ಅವರು ಸ್ಪಷ್ಟಪಡಿಸಿದ್ದಾರೆ.

​ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆಯ ಪಾರದರ್ಶಕ ಕಾರ್ಯವೈಖರಿಯ ಕುರಿತು ಸಮಗ್ರ ಮಾಹಿತಿ ನೀಡಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಮ್ಮ ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ತಾಲೂಕಿನಾದ್ಯಂತ ಹಲವಾರು ಮಹತ್ವದ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಕಾರ್ಮಿಕರ ಸರ್ವಾಂಗೀಣ ಏಳಿಗೆಗಾಗಿ ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ.

ಕಟ್ಟಡ ಕಾರ್ಮಿಕರು ಸಮಾಜದ ಬೆನ್ನೆಲುಬು. ಅವರ ಶ್ರಮದಿಂದಲೇ ಭವ್ಯ ಕಟ್ಟಡಗಳು ತಲೆ ಎತ್ತುತ್ತವೆ. ಆದರೆ, ಅವರ ಬದುಕು ಹಸನಾಗಲು ಸರ್ಕಾರದ ಸೌಲಭ್ಯಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಹಗಲಿರುಳು ಶ್ರಮಿಸುತ್ತಿದೆ. ಆದರೆ, ಕಾರ್ಮಿಕರೆಂದು ಹೇಳಿಕೊಳ್ಳುವ ಕೆಲವರು ಉದ್ದೇಶಪೂರ್ವಕವಾಗಿ ಸಂಘಟನೆಯ ಹೆಸರಿಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಕಾರ್ಮಿಕರ ಗುರುತಿನ ಚೀಟಿ (ಲೇಬರ್ ಕಾರ್ಡ್) ಮಾಡಿಕೊಡಲು ನಮ್ಮ ಪದಾಧಿಕಾರಿಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು,” ಎಂದು ಸುಂದರ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.

​ಸಂಘದ ಜಿಲ್ಲಾಧ್ಯಕ್ಷರಾದ ಸಂಜಯ್ ಮಾತನಾಡಿ, “ಲೇಬರ್ ಕಾರ್ಡ್‌ಗೆ ಹೆಚ್ಚುವರಿ ಹಣ ಪಡೆದಿರುವ ಆರೋಪದ ಕುರಿತು ನಾವು ಈಗಾಗಲೇ ಎಲ್ಲಾ ಆಯಾಮಗಳಲ್ಲಿ ಆಂತರಿಕ ತನಿಖೆ ನಡೆಸಿದ್ದೇವೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದು ದೃಢಪಟ್ಟಿದೆ.

ಆರೋಪ ಮಾಡುವವರ ಬಳಿ ಯಾವುದೇ ನಿಖರ ಸಾಕ್ಷ್ಯಾಧಾರಗಳಿದ್ದರೆ ಅವರು ಧಾರಾಳವಾಗಿ ಕಾನೂನು ಕ್ರಮ ಕೈಗೊಳ್ಳಬಹುದು, ನಾವು ಯಾವುದೇ ತನಿಖೆಗೂ ಸಿದ್ಧ. ಅದನ್ನು ಬಿಟ್ಟು ಕೇವಲ ಮಾಧ್ಯಮಗಳ ಮುಂದೆ ಬಂದು ಸಂಘಟನೆಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ, ಸಂಘಟನೆಯು ಅದನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಸಂಘಟನೆಯೇ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿದೆ.

​ಹೊಸನಗರ ತಾಲೂಕು ಗ್ರಾಮಾಂತರ ಅಧ್ಯಕ್ಷರಾದ ಮಹಮ್ಮದ್ ಹುಸೇನ್ ಅವರು ಆರೋಪಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನನ್ನ ಹಾಗೂ ಇತರ ಕೆಲ ಪದಾಧಿಕಾರಿಗಳ ಮೇಲೆ ಸುಖಾಸುಮ್ಮನೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಕಾರ್ಡ್ ನೀಡಿಲ್ಲ ಹಾಗೂ ಹಣ ಪಡೆಯಲಾಗಿದೆ ಎಂಬುದು ಸತ್ಯವೇ ಆಗಿದ್ದರೆ, ಈ ವಿಚಾರವನ್ನು ಅವರು ಇಲ್ಲಿಯವರೆಗೂ ನಡೆದ ಸಂಘದ ಯಾವುದೇ ಸಭೆಗಳಲ್ಲಿ ಏಕೆ ಪ್ರಸ್ತಾಪಿಸಿಲ್ಲ?” ಎಂದು ಪ್ರಶ್ನಿಸಿದರು.

ನಮ್ಮ ಸಂಘಟನೆಯು ಕಾರ್ಮಿಕರ ಸಹಕಾರದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಮ್ಮ ಈ ಬೆಳವಣಿಗೆಯನ್ನು ಸಹಿಸಲಾಗದವರು ಮಾಡುತ್ತಿರುವ ತೇಜೋವಧೆಯ ಹುನ್ನಾರವಿದು. ಇಂತಹ ಕೀಳು ಮಟ್ಟದ ಆರೋಪಗಳನ್ನು ಮಾಡುವವರು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದರು.

ಇದೇ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ವೇಳೆ ತೀವ್ರ ರಕ್ತಸ್ರಾವ ಉಂಟಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಕೋಡೂರು ಶಾಖವಳ್ಳಿ ಗ್ರಾಮದ ಸುಮಾ ಅವರ ಕುಟುಂಬಕ್ಕೆ ಕಾರ್ಮಿಕರ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು. ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ರಾಜುರೆಡ್ಡಿ ಅವರು ಧನಸಹಾಯವನ್ನು ಸುಮಾ ಅವರ ಪತಿಗೆ ವಿತರಿಸಿದರು.

​ಈ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಮಿಕ ಸದಸ್ಯರು ಉಪಸ್ಥಿತರಿದ್ದರು.

About The Author