Headlines

ಆನಂದಪುರ : ಅಪ್ರಾಪ್ತೆಯ ಮೇಲೆ ದೌರ್ಜನ್ಯ – ಪೋಕ್ಸೋ ಪ್ರಕರಣ ದಾಖಲು|Pocso

ಸಾಗರ : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ತಾಲೂಕಿನ ಆನಂದಪುರ ಹೋಬಳಿಯ ಗ್ರಾಮವೊಂದರ 24 ವರ್ಷದ ಯುವಕನ ವಿರುದ್ಧ ಆನಂದಪುರ ಠಾಣೆಯಲ್ಲಿ ಮಂಗಳವಾರ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಬುಧವಾರ ತಾಲೂಕು ಕೇಂದ್ರದ ಡಿವೈಎಸ್‌ಪಿ ಕಚೇರಿಯಲ್ಲಿ ಗ್ರಾಮಸ್ಥರು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಮಂಗಳವಾರ ಸಂಜೆಯ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆರೋಪಿ ಯುವಕ ಅಪ್ರಾಪ್ತೆಯ ಮನೆಗೆ ಹೋಗಿ ಕುಡಿಯಲು ನೀರು ಕೇಳಿದ್ದಾನೆ. ಆಕೆ ನೀರು ತರಲು ಅಡುಗೆ ಮನೆಗೆ ಹೋದಾಗ ಆತನೂ ಹಿಂದಿನಿಂದ ಹೋಗಿ ದೌರ್ಜನ್ಯ ಎಸಗಿದ್ದಾನೆ. ಹೆದರಿದ ಬಾಲಕಿ ಜೋರಾಗಿ ಕೂಗಿಕೊಂಡಿದ್ದಾಳೆ. ತತ್ ಕ್ಷಣ ಆರೋಪಿ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಕೂಡಲೆ ಅಪ್ರಾಪ್ತೆಯ ಪೋಷಕರು ಆನಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಮ್ಮದೇ ಗ್ರಾಮದ ಯುವಕನ ದುಷ್ಕೃತ್ಯ ಖಂಡಿಸಿ ಸುಮಾರು 50ಕ್ಕೂ ಹೆಚ್ಚು ಗ್ರಾಮಸ್ಥರು ಬುಧವಾರ ನಗರದ ಡಿವೈಎಸ್‌ಪಿ ಕಚೇರಿಗೆ ಬಂದು ಕೂಡಲೇ ಆರೋಪಿಯನ್ನು ಬಂಧಿಸಿ, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕೂಡಲೇ ಆರೋಪಿಯನ್ನು ಬಂಧಿಸಲು ಕೆಲಸ ನಡೆಯುತ್ತಿದೆ. ಇಂಥ ದೌರ್ಜನ್ಯಗಳನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ. ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *