Headlines

ಶಿಕ್ಷಕರು ಉತ್ತಮ ಸಮಾಜ ನಿರ್ಮಾಣದ ಆಧಾರ ಸ್ತಂಭಗಳು: ಶಾಸಕ ಗೋಪಾಲಕೃಷ್ಣ ಬೇಳೂರು|gkb

ಹೊಸನಗರ : ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಶಿಕ್ಷಕರು ಉತ್ತಮ ಸಮಾಜ ನಿರ್ಮಾಣದ ಆಧಾರ ಸ್ತಂಭಗಳು ಎಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಆರ್ಯ ಈಡಿಗರ ಸಭಾ ಭವನದಲ್ಲಿ ಆಯೋಜಿಸಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು.


ಹೊಸನಗರ ತಾಲೂಕಿನಲ್ಲಿ 41 ಪ್ರೌಢಶಾಲೆಗಳಲ್ಲಿ 17 ಶಾಲೆ 100% ಫಲಿತಾಂಶ ಜತೆ ಒಟ್ಟು 92.05 % ಫಲಿತಾಂಶ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಈ ತಾಲೂಕಿನ ಮಕ್ಕಳು ವ್ಯಾಸಂಗದಲ್ಲಿ ಮುಂದೆ ಬರುತ್ತಿರುವುದಕ್ಕೆ ತಾಲೂಕಿನ ಶಿಕ್ಷಕರೇ ಕಾರಣರಾಗಿದ್ದು, ಮುಂದಿನ ದಿನದಲ್ಲಿ ಶೇಕಡಾ 100ಕ್ಕೆ 100 ಫಲಿತಾಂಶ ಬರುವಂತೆ ಮಾಡಿ ರಾಜ್ಯಕ್ಕೆ ಹೊಸನಗರ ತಾಲೂಕಿನ ಕೀರ್ತಿ ಬೆಳಗಿಸಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.

ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವರೇ ಗುರುಗಳು ಪ್ರತಿಯೊಬ್ಬರೂ ಯಾವುದೇ ಪದವಿಗೆ ಹೋದರೂ ಗುರುಗಳ ಋಣವನ್ನು ಎಂದಿಗೂ ತೀರಸಲಾಗದು, ವಿದ್ಯೆಯ ಬುದ್ಧಿಯನ್ನು ಕಲಿಸುವ ಮತ್ತು ಜೀವನವನ್ನು ಸ್ಫೂರ್ತಿದಾಯಕವಾಗಿಸುವ ಶಿಕ್ಷಕರು ನಮ್ಮ ದೇಶದಲ್ಲಿ ರಾಜ್ಯದಲ್ಲಿ ಪ್ರತಿ ಜಿಲ್ಲೆ ತಾಲೂಕಿನಲ್ಲಿ ಇರುವುದೇ ನಮಗೆ ಹೆಮ್ಮೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೀತಿ ವಾತ್ಸಲ್ಯ ತುಂಬಿ ಪಾಠ ಮಾಡಬೇಕು. ಯಾವುದು ಒಳ್ಳೆಯದು. ಯಾವುದು ಕೆಟ್ಟದ್ದು ಎಂದು ಮನವರಿಕೆ ಮಾಡಿಕೊಡುವವರೇ ನಿಜವಾದ ಶಿಕ್ಷಕರು, ಸಮಾಜ ಹಾಗು ವಿದ್ಯಾರ್ಥಿಗಳು ಶಿಕ್ಷಕರನ್ನು ಉನ್ನತ ಸ್ಥಾನದಲ್ಲಿ ಇರಿಸಿ ಗೌರವಿಸುತ್ತಾರೆ. ಸಮಾಜದಲ್ಲಿ ಶಿಕ್ಷಕರುಗಳ ಸೇವೆ ಅತ್ಯುತ್ತಮವಾದ ಸೇವೆಯಾಗಿದ್ದು, ಬಲಿಷ್ಠ ರಾಷ್ಟ್ರದ ನಿರ್ಮಾಣ ಹಾಗೂ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದರು.

ಸಾಗರದ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸಫ್ರಾಜ್ ಚಂದ್ರಗುತ್ತಿ ಶಿಕ್ಷಕರ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್, ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕುಬೇಂದ್ರಪ್ಪ, ರಾಜುಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರರಾವ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *