Headlines

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ

Mysuru DRM Mudit Mittal inspected Arasalu Railway Station and Malgudi Museum, assuring action on basic facilities and seeking additional funds for museum development.

ರಿಪ್ಪನ್‌ಪೇಟೆ, ಆ.8: ಸಮೀಪದ ಅರಸಾಳು ರೈಲ್ವೆ ನಿಲ್ದಾಣಕ್ಕೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (DRM) ಮುದಿತ್ ಮಿತ್ತಲ್ ಭೇಟಿ ನೀಡಿ ನಿಲ್ದಾಣದ ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೇ ವೇಳೆ ನಿಲ್ದಾಣದ ಆವರಣದಲ್ಲಿರುವ ‘ಮಾಲ್ಗುಡಿ ಮ್ಯೂಸಿಯಂ’ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ವೀಕ್ಷಿಸಿದರು.

ಅರಸಾಳು ರೈಲ್ವೆ ನಿಲ್ದಾಣದಲ್ಲಿ ಶುಚಿತ್ವ, ಕುಡಿಯುವ ನೀರು, ನಿರ್ವಹಣೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ DRM ಮುದಿತ್ ಮಿತ್ತಲ್, ನಿಲ್ದಾಣದಲ್ಲಿರುವ ಕೆಲವು ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅರಸಾಳು ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಿದ್ದರೂ, ನಿಲ್ದಾಣ ಹಾಗೂ ಮಾಲ್ಗುಡಿ ಮ್ಯೂಸಿಯಂನಲ್ಲಿ ಸಮರ್ಪಕ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಕೊರತೆ ಕಂಡುಬರುತ್ತಿರುವ ಕುರಿತು ಮಾಧ್ಯಮದವರು ಪ್ರಶ್ನಿಸಿದರು. ಮ್ಯೂಸಿಯಂ ಅಭಿವೃದ್ಧಿಗೆ ರೈಲ್ವೆ ಇಲಾಖೆ ಹೆಚ್ಚಿನ ಆದ್ಯತೆ ನೀಡದಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೂ ಅವರು ಉತ್ತರಿಸಿದರು.

ಮಾಲ್ಗುಡಿ ಮ್ಯೂಸಿಯಂ ಅಭಿವೃದ್ಧಿಗೆ ಹೆಚ್ಚುವರಿ ಅನುದಾನದ ಬೇಡಿಕೆಯನ್ನು ಈಗಾಗಲೇ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಮ್ಯೂಸಿಯಂ ಅನ್ನು ಅಗತ್ಯ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುದಿತ್ ಮಿತ್ತಲ್ ಹೇಳಿದರು.

ರೈಲ್ವೆ ಇಲಾಖೆಯ ಪ್ರಮುಖ ಜವಾಬ್ದಾರಿ ರೈಲುಗಳ ಸಂಚಾರವನ್ನು ಸಮರ್ಪಕವಾಗಿ ನಿರ್ವಹಿಸುವುದಾಗಿದೆ. ರೈಲ್ವೆ ನಿಲ್ದಾಣದ ಹೊರಗಿನ ಸ್ಥಳೀಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಅಗತ್ಯವಿರುವಲ್ಲಿ ರೈಲ್ವೆ ಇಲಾಖೆ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದರು.

ನಿಲ್ದಾಣದ ಪರಿಶೀಲನೆ ಬಳಿಕ ಮುದಿತ್ ಮಿತ್ತಲ್ ಅವರು ಅಲ್ಲಿರುವ ‘ಮಾಲ್ಗುಡಿ ಚಾಯ್’ ಕೇಂದ್ರಕ್ಕೆ ಭೇಟಿ ನೀಡಿ ಚಹಾ ಸವಿದರು.

ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಆರ್‌ಪಿಎಫ್ ಉಸ್ತುವಾರಿ ಕೊಂಡ ರೆಡ್ಡಿ, ಜಗದೀಶ್, ಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

About The Author