SAGARA | ಲಾಡ್ಜ್ ಕೊಠಡಿಯಲ್ಲಿ ಗಾಂಜಾ ಸೇವನೆ ಆರೋಪ; ಯುವತಿ ಸೇರಿ ನಾಲ್ವರು ಪೊಲೀಸರ ವಶಕ್ಕೆ | Four people, including a young woman, were detained for allegedly consuming marijuana inside a lodge room on Jog Road in Sagar. A case has been registered against five people.
ಸಾಗರ: ಜೋಗ ರಸ್ತೆಯಲ್ಲಿರುವ ಲಾಡ್ಜ್ವೊಂದರ ಕೊಠಡಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಯುವತಿ ಸೇರಿದಂತೆ ನಾಲ್ವರನ್ನು ಸಾಗರ ಟೌನ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 6ರಂದು ಮಧ್ಯಾಹ್ನ ಜೋಗ ರಸ್ತೆಯ ಲಾಡ್ಜ್ವೊಂದರಲ್ಲಿ ಕೆಲವು ಯುವಕ-ಯುವತಿಯರು ಕೊಠಡಿ ಬಾಡಿಗೆಗೆ ಪಡೆದು ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಮಾಹಿತಿ ಆಧರಿಸಿ ಸಾಗರ ಟೌನ್ ಠಾಣೆಯ ಪಿಎಸ್ಐ ಶಾಂತರಾಜ್ ಹೆಚ್.ಜಿ. ಅವರ ನೇತೃತ್ವದ ಪೊಲೀಸ್ ತಂಡ ಲಾಡ್ಜ್ಗೆ ತೆರಳಿ ಪರಿಶೀಲನೆ ನಡೆಸಿತು.
ಈ ವೇಳೆ ಲಾಡ್ಜ್ನ ಒಂದು ಕೊಠಡಿಯಲ್ಲಿ ಮೂವರು ಯುವಕರು ಹಾಗೂ ಒಬ್ಬ ಯುವತಿ ಇದ್ದು, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಕೊಠಡಿಯನ್ನು ಪರಿಶೀಲಿಸಿದಾಗ ಟೇಬಲ್ ಮೇಲೆ ಸಿಗರೇಟ್ಗಳನ್ನು ಕಟ್ ಮಾಡಿ, ಅದರಲ್ಲಿದ್ದ ತಂಬಾಕನ್ನು ತೆಗೆದು ಗಾಂಜಾ ತುಂಬಿ ಸೇವನೆ ಮಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯುವತಿ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪ್ರಕರಣದಲ್ಲಿ ಒಟ್ಟು ಐವರ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
