ಎಂಟು ಕಾಲು, ಮೂರು ಕಿವಿ, ಎರಡು ಬಾಲ, ಎರಡು ನಾಲಿಗೆ ಇರುವ ಕುರಿ ಜನನ – ಗ್ರಾಮಸ್ಥರಲ್ಲಿ ಅಚ್ಚರಿ
A rare lamb with eight legs, three ears, two tails, and two tongues was born in Uddri Vaddigere village near Soraba, Karnataka. The newborn survived only for a few hours, drawing huge public attention.
ಸೊರಬ, ಆ.6: ತಾಲೂಕಿನ ಉದ್ರಿ ಗ್ರಾಮ ಸಮೀಪದ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ಅಪರೂಪದ ದೈಹಿಕ ವೈಶಿಷ್ಟ್ಯಗಳನ್ನು ಹೊಂದಿದ್ದ ಕುರಿಮರಿಯೊಂದು ಜನಿಸಿ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ಘಟನೆ ಗ್ರಾಮಸ್ಥರಲ್ಲಿ ತೀವ್ರ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ.
ಉದ್ರಿ ವಡ್ಡಿಗೆರೆ ಗ್ರಾಮದ ನಿವಾಸಿಗಳಾದ ಕಾಳಿಂಗಪ್ಪ ಭಾವಿಕಟೇರ್ ಹಾಗೂ ಪುಟ್ಟಮ್ಮ ದಂಪತಿ ಕೃಷಿಯ ಜೊತೆಗೆ ಕುರಿ ಸಾಕಾಣಿಕೆ ನಡೆಸುತ್ತಿದ್ದಾರೆ. ಅವರ ಸಾಕಾಣಿಕೆಯಲ್ಲಿದ್ದ ಕುರಿಯೊಂದು ಬುಧವಾರ ಹೆರಿಗೆ ನೋವು ಕಾಣಿಸಿಕೊಂಡಾಗ ಆರಂಭದಲ್ಲಿ ಅವಳಿ ಮರಿಗಳು ಜನಿಸಬಹುದೆಂದು ಕುಟುಂಬದವರು ಭಾವಿಸಿದ್ದರು. ಆದರೆ ಹೆರಿಗೆ ಪೂರ್ಣಗೊಂಡ ಬಳಿಕ ಒಂದೇ ದೇಹದಲ್ಲಿ ಅಪರೂಪದ ದೈಹಿಕ ವೈಶಿಷ್ಟ್ಯಗಳನ್ನು ಹೊಂದಿದ ಕುರಿಮರಿ ಜನಿಸಿರುವುದು ಕಂಡುಬಂದಿದೆ.
ಜನಿಸಿದ ಕುರಿಮರಿಗೆ ಎಂಟು ಕಾಲುಗಳು, ಮೂರು ಕಿವಿಗಳು, ಎರಡು ಬಾಲಗಳು ಹಾಗೂ ಎರಡು ನಾಲಿಗೆಗಳು ಇದ್ದು, ದೇಹದ ರಚನೆಯೂ ಸಾಮಾನ್ಯ ಕುರಿಮರಿಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಈ ಅಪರೂಪದ ದೃಶ್ಯ ಕಂಡ ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದು, ಸುದ್ದಿ ಹರಡುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಆಗಮಿಸಿ ಕುರಿಮರಿಯನ್ನು ವೀಕ್ಷಿಸಿದರು. ಹಲವರು ಮೊಬೈಲ್‌ಗಳಲ್ಲಿ ಫೋಟೋ ಹಾಗೂ ವಿಡಿಯೊಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ವಿಚಿತ್ರ ದೈಹಿಕ ರಚನೆಯೊಂದಿಗೆ ಜನಿಸಿದ್ದ ಈ ಕುರಿಮರಿ ಕೆಲವೇ ಗಂಟೆಗಳ ಕಾಲ ಜೀವಂತವಾಗಿದ್ದು, ಬಳಿಕ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಪಶುವೈದ್ಯರ ಪ್ರಕಾರ, ಇಂತಹ ಅಪರೂಪದ ಜನನಗಳು ಭ್ರೂಣದ ಬೆಳವಣಿಗೆಯ ಹಂತದಲ್ಲಿ ಉಂಟಾಗುವ ಜನ್ಮಜಾತ ದೈಹಿಕ ವೈಪರೀತ್ಯಗಳು ಅಥವಾ ಬೆಳವಣಿಗೆಯ ಅಸಹಜತೆಯಿಂದ ಸಂಭವಿಸಬಹುದು. ಇಂತಹ ಮರಿಗಳು ಸಾಮಾನ್ಯವಾಗಿ ಹೆಚ್ಚು ಕಾಲ ಬದುಕುವುದು ಅಪರೂಪ ಎಂದು ಅವರು ತಿಳಿಸಿದ್ದಾರೆ.