ಪೊಲೀಸರ ಅಪಹಾಸ್ಯ ಮಾಡಿದ ರೀಲ್ಸ್ ವೈರಲ್: ಇಬ್ಬರನ್ನು ವಶಕ್ಕೆ ಪಡೆದ ಶಿವಮೊಗ್ಗ ಸಂಚಾರಿ ಪೊಲೀಸರು
Shivamogga Traffic Police detained two youths for posting a social media reel mocking police officers and a woman rider. A case has been registered under the Motor Vehicles Act.
ಶಿವಮೊಗ್ಗ, ಜು.08: ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್ ಪೊಲೀಸರನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ರೀಲ್ಸ್ ಮಾಡಿ ವೈರಲ್ ಮಾಡಿದ ಇಬ್ಬರು ಯುವಕರನ್ನು ಶಿವಮೊಗ್ಗ ಸಂಚಾರಿ ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಸೋಮವಾರ ನಗರದ ಟಿ. ಸೀನಪ್ಪಶೆಟ್ಟಿ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಯುವಕ ಹಾಗೂ ಹಿಂಬದಿ ಸವಾರ, ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ವಿಡಿಯೊ ಚಿತ್ರೀಕರಿಸಿದ್ದರು. ಇದೇ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಹಿಳಾ ಮೊಪೆಡ್ ಸವಾರರನ್ನೂ ಹಾಸ್ಯಕ್ಕೆ ಗುರಿಪಡಿಸಿ ರೀಲ್ಸ್ ಸಿದ್ಧಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ವಿಡಿಯೊ ವೈರಲ್ ಆದ ಬಳಿಕ ಕಾರ್ಯಾಚರಣೆ ನಡೆಸಿದ ಶಿವಮೊಗ್ಗ ಸಂಚಾರಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ಬಳಸಿದ್ದ ಮೊಪೆಡ್ ಅನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ವಿಡಿಯೊ ಮಾಡಿಸಿ ಅದನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನೂ ವಾಹನ ಸವಾರನ ವಿರುದ್ಧ ಭಾರತೀಯ ಮೋಟಾರು ವಾಹನಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ಇಲಾಖೆಯ ಕ್ರಮಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.