Headlines

24 ಗಂಟೆಯಲ್ಲೇ ಮಹಿಷಿ ಮಠ ಕಳವು ಪ್ರಕರಣ ಭೇದಿಸಿದ ಪೊಲೀಸರು : ₹1 ಕೋಟಿ ಮೌಲ್ಯದ ಚಿನ್ನ ಸಹಿತ ಆರೋಪಿ ವಶಕ್ಕೆ

Screenshot 2026 06 18 19 25 47 505 com.android.chrome edit

24 ಗಂಟೆಯಲ್ಲೇ ಮಹಿಷಿ ಮಠ ಕಳವು ಪ್ರಕರಣ ಭೇದಿಸಿದ ಪೊಲೀಸರು : ₹1 ಕೋಟಿ ಮೌಲ್ಯದ ಚಿನ್ನ ಸಹಿತ ಆರೋಪಿ ವಶಕ್ಕೆ

Shivamogga police solved the Mahishi Uttaradi Mutt gold theft case within 24 hours, arresting one accused and recovering stolen gold ornaments worth over ₹1 crore

ಶಿವಮೊಗ್ಗ, ಜೂನ್ 18: ತೀರ್ಥಹಳ್ಳಿ ತಾಲ್ಲೂಕಿನ ಐತಿಹಾಸಿಕ ಮಹಿಷಿ ಉತ್ತರಾದಿ ಮಠದಲ್ಲಿ ನಡೆದಿದ್ದ ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಬಾಳಗಾರು ಸಮೀಪ ತುಂಗಾ ನದಿಯ ದಡದಲ್ಲಿರುವ ಮಹಿಷಿ ಉತ್ತರಾದಿ ಮಠದಲ್ಲಿ ಮಧ್ವ ಪರಂಪರೆಯ ಪ್ರಖ್ಯಾತ ಯತಿಗಳಲ್ಲಿ ಒಬ್ಬರಾದ ಉತ್ತರಾದಿ ಮಠದ 26ನೇ ಪೀಠಾಧಿಪತಿ ಶ್ರೀ ಸತ್ಯಸಂಧ ತೀರ್ಥರ ಮೂಲ ಬೃಂದಾವನ ಇದೆ. ಧಾರ್ಮಿಕ ಮಹತ್ವ ಹೊಂದಿರುವ ಈ ಕ್ಷೇತ್ರಕ್ಕೆ ಪ್ರತಿದಿನ ಭಕ್ತರು ಭೇಟಿ ನೀಡುತ್ತಾರೆ.

ಬುಧವಾರ ನಡೆದ ಗುರುವಂದನೆ ಕಾರ್ಯಕ್ರಮದ ವೇಳೆ ಮಠದ ಗರ್ಭಗುಡಿಯಲ್ಲಿದ್ದ ಚಿನ್ನದ ವಸ್ತುಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತಕ್ಷಣವೇ ಎಫ್‌ಐಆರ್ ದಾಖಲಿಸಲಾಗಿತ್ತು.

ದೂರಿನ ಪ್ರಕಾರ, ಒಟ್ಟು 1 ಕೋಟಿ 1 ಲಕ್ಷ 40 ಸಾವಿರ ರೂಪಾಯಿ ಮೌಲ್ಯದ, 780 ಗ್ರಾಂ ತೂಕದ 16 ಚಿನ್ನದ ಹಲಗಾರತಿಗಳನ್ನು ಕಳವು ಮಾಡಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ತನಿಖೆಯ ವೇಳೆ ಶಿವಮೊಗ್ಗ ನಗರದ ಗಾಂಧಿನಗರ ನಿವಾಸಿ 25 ವರ್ಷದ ರಾಘವೇಂದ್ರ ಆಚಾರ್ಯ ಎಂಬಾತನನ್ನು ಬಂಧಿಸಿ, ಆತನ ಬಳಿಯಿಂದ ಕಳುವಾಗಿದ್ದ ಚಿನ್ನದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ತೀರ್ಥಹಳ್ಳಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್ ಹಾಗೂ ಮಾಳೂರು ಸರ್ಕಲ್ ಇನ್ಸ್‌ಪೆಕ್ಟರ್ ರಾಜಶೇಖರ್ ಎಲ್. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮಾಳೂರು ಪಿಎಸ್‌ಐ ಸುನಿಲ್ ಹಾಗೂ ಸಿಬ್ಬಂದಿಗಳಾದ ಅಂಗೇಗೌಡ, ಸುರಕ್ಷಿತ್, ಕುಮಾರ್, ರವಿ, ಸುರೇಶ್ ನಾಯ್ಕ, ಸಂತೋಷ್, ವಿನಯ್ ಕುಮಾರ್ ಮತ್ತು ಜೀಪ್ ಚಾಲಕ ಅವಿನಾಶ್ ತಂಡದಲ್ಲಿ ಪಾಲ್ಗೊಂಡಿದ್ದರು.

ಪ್ರಕರಣವನ್ನು ಅತಿ ಕಡಿಮೆ ಅವಧಿಯಲ್ಲಿ ಭೇದಿಸಿ ಕಳುವಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.