

ರೌಡಿಶೀಟರ್ ಆದಿಲ್ ಬಂಧನ: ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ
Shivamogga police arrested rowdy-sheeter Adil, a prime accused in the Yaseen Qureshi murder and kidnapping cases. He has been shifted to Parappana Agrahara Jail under tight security.
ಶಿವಮೊಗ್ಗ: ನಗರದಲ್ಲಿ ಸರಣಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಹಾಗೂ ಯಾಸೀನ್ ಖುರೇಶಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಆದಿಲ್ ಹಾಗೂ ಆತನ ಸಹಚರನನ್ನು ಡಿವೈಎಸ್ಪಿ ಸಂಜೀವ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಅಪರಾಧ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆದಿಲ್‌ನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ಭದ್ರತಾ ದೃಷ್ಟಿಯಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಮೇ 9ರಂದು ನ್ಯೂ ಮಂಡ್ಲಿಯ ಮೊಬೈಲ್ ಅಂಗಡಿಯಲ್ಲಿ ಕೆಲಸ ಕಲಿಯುತ್ತಿದ್ದ ಇರ್ಫಾನ್ ಎಂಬ ಯುವಕನನ್ನು ಇಬ್ಬರು ಅಪರಿಚಿತರ ಮೂಲಕ ಅಪಹರಿಸಿದ್ದ ಆರೋಪವೂ ಆದಿಲ್ ವಿರುದ್ಧ ಕೇಳಿಬಂದಿದೆ. ಬೈಪಾಸ್ ಪ್ರದೇಶದಿಂದ ಕಿಯಾ ಕಾರಿನಲ್ಲಿ ಕೂರಿಸಿಕೊಂಡು ಭದ್ರಾವತಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದ ತನಿಖೆ ವೇಳೆ ಪೊಲೀಸರ ದಾಳಿ ನಡೆದಾಗ ಆದಿಲ್ ಪರಾರಿಯಾಗಿದ್ದನು. ಇದೀಗ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದಲ್ಲದೆ, ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಸೆಪ್ಟೆಂಬರ್ 22ರಂದು ಇಬ್ಬರ ಮೇಲೆ ಹಲ್ಲೆ ನಡೆಸಿ, ಅಪಹರಿಸಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿಯೂ ಆದಿಲ್ ಮತ್ತು ಆತನ ಗ್ಯಾಂಗ್ ಭಾಗಿಯಾಗಿದ್ದರೆಂಬ ಆರೋಪಗಳಿವೆ.
ಆದಿಲ್ ಜೊತೆಗೆ ಮತ್ತೋರ್ವ ಆರೋಪಿಯನ್ನೂ ಬಂಧಿಸಿರುವ ಪೊಲೀಸರು, ಇಬ್ಬರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.