w
Headlines
Home » ಸಿಡಿಲಿನ ಅಬ್ಬರ: 52 ಕುರಿಗಳ ದುರ್ಮರಣ

ಸಿಡಿಲಿನ ಅಬ್ಬರ: 52 ಕುರಿಗಳ ದುರ್ಮರಣ

IMG 20260518 WA0019

ಸಿಡಿಲಿನ ಅಬ್ಬರ: 52 ಕುರಿಗಳ ದುರ್ಮರಣ

Lightning strike at Siriyuru in Bhadravathi taluk kills 52 sheep, causing huge loss to shepherds. Heavy rain and strong winds also damage houses in several villages.

ಭದ್ರಾವತಿ: ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮದಲ್ಲಿ ಭಾನುವಾರ ಸಂಜೆ ಸಂಭವಿಸಿದ ಸಿಡಿಲಿನ ಅವಘಡದಲ್ಲಿ ೫೨ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆಯ ನಿವಾಸಿ ನರಸಿಂಹಮೂರ್ತಿ ಅವರು ಕಳೆದ ೧೪ ದಿನಗಳಿಂದ ರವಿಕುಮಾರ್ ಎಂಬುವರ ತೋಟದಲ್ಲಿ ಸುಮಾರು ೪೦೦ ಕುರಿಗಳ ಮಂದೆಯನ್ನು ಬಿಡಾರ ಹಾಕಿದ್ದರು. ಭಾನುವಾರ ಸಂಜೆ ಸುಮಾರು ೭.೩೦ರ ವೇಳೆ ಏಕಾಏಕಿ ಗುಡುಗು-ಸಿಡಿಲು ಸಹಿತ ಮಳೆ ಆರಂಭಗೊಂಡಿದ್ದು, ಒಂದು ಕುರಿಗೆ ಸಿಡಿಲು ಬಡಿದ ಪರಿಣಾಮ ಉಂಟಾದ ಭಾರೀ ಶಬ್ದ ಹಾಗೂ ಆತಂಕದಿಂದ ಇನ್ನೂ ಹಲವಾರು ಕುರಿಗಳು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಶಿವಮೊಗ್ಗ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವಿನಯ್, ವೈದ್ಯಾಧಿಕಾರಿ ಮಧುಸೂಧನ್, ತಾಲೂಕು ಕಚೇರಿಯ ಕಂದಾಯಾಧಿಕಾರಿ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಮಾಹಿತಿ ತಿಳಿದು ಗ್ರಾಮಸ್ಥರು ಹಾಗೂ ಮುಖಂಡರು ಸ್ಥಳಕ್ಕೆ ಧಾವಿಸಿ ಕುರಿ ಮಾಲೀಕ ನರಸಿಂಹಮೂರ್ತಿಗೆ ಧೈರ್ಯ ತುಂಬಿದರು. ಮಾಜಿ ನಗರಸಭಾ ಸದಸ್ಯ ಹನುಮಂತು, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಕಲ್ಯಾಣ ಕೇಂದ್ರದ ನಿರ್ದೇಶಕ ನರಸಿಂಹಚಾರ್, ರಾಜೇಶ್ ಸೇರಿದಂತೆ ಹಲವರು ಸಂಬಂಧಿತ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವ ಪ್ರಕೃತಿ ವಿಕೋಪ ಪರಿಹಾರದ ಅನ್ವಯ ಮೃತಪಟ್ಟ ಪ್ರತಿಯೊಂದು ಕುರಿಗೂ ₹೫ ಸಾವಿರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಇದೇ ವೇಳೆ ತಾಲೂಕಿನ ಕೂಡ್ಲಿಗೆರೆ ಹಾಗೂ ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿದ್ದು, ಅನೇಕ ಮನೆಗಳ ಮೇಲ್ಚಾವಣಿಯ ತಗಡು ಶೀಟ್ ಹಾಗೂ ಹಂಚುಗಳು ಹಾರಿಹೋಗಿವೆ.

ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯದಿಂದ ಜನರು ಕತ್ತಲಲ್ಲಿ ಪರದಾಡುವಂತಾಯಿತು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ ಎಂದು ತಹಸೀಲ್ದಾರ್-೨ ಮಂಜಾನಾಯ್ಕ್ ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.