“ಸಂವಿಧಾನದ ಮೌಲ್ಯಗಳೇ ಪೊಲೀಸ್ ಸೇವೆಗೆ ದಿಕ್ಕು” – ಆನಂದಪುರ ಪಿಎಸ್‌ಐ ಪ್ರವೀಣ್ ಎಸ್ ಪಿ
SI Praveen of Anandapura Police emphasized the importance of Dr. B.R. Ambedkar’s Constitution, highlighting equality, justice, and duty in maintaining law and order.
ಆನಂದಪುರ: ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಮೌಲ್ಯಗಳೇ ಪೊಲೀಸ್ ಇಲಾಖೆಯ ಸೇವೆಗೆ ನಿಜವಾದ ದಿಕ್ಕು ತೋರಿಸುತ್ತವೆ ಎಂದು ಆನಂದಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಎಸ್ ಪಿ ಹೇಳಿದರು.

ಅಂಬೇಡ್ಕರ್ ಜಯಂತಿ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನವು ಕೇವಲ ಕಾನೂನು ಪಠ್ಯವಲ್ಲ, ದೇಶದ ಆಡಳಿತ ವ್ಯವಸ್ಥೆ ಹಾಗೂ ಸಮಾಜದ ನ್ಯಾಯಬದ್ಧ ಬದುಕಿಗೆ ಮಾರ್ಗಸೂಚಿಯಾಗಿದೆ, ಅಂಬೇಡ್ಕರ್ ಅವರು ರೂಪಿಸಿದ ಈ ಮಹತ್ವದ ದಸ್ತಾವೇಜು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಕಾಪಾಡುವುದರ ಜೊತೆಗೆ, ಕರ್ತವ್ಯಗಳನ್ನೂ ಸ್ಪಷ್ಟವಾಗಿ ನಿರ್ದಿಷ್ಟಪಡಿಸಿದೆ ಎಂದರು.
ಪೊಲೀಸರಾಗಿ ಕೆಲಸ ಮಾಡುವ ನಾವು ಸಂವಿಧಾನದ ಆತ್ಮವನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಸಹೋದರತ್ವ ಎಂಬ ಮೂಲಭೂತ ಮೌಲ್ಯಗಳನ್ನು ನಮ್ಮ ದಿನನಿತ್ಯದ ಕರ್ತವ್ಯಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಶಾಂತಿ ಮತ್ತು ಸುವ್ಯವಸ್ಥೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇಂದು ಸಮಾಜದಲ್ಲಿ ಕಾನೂನು ಪಾಲನೆಯ ಬಗ್ಗೆ ಜಾಗೃತಿ ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜನರೊಂದಿಗೆ ವಿಶ್ವಾಸದ ಬಾಂಧವ್ಯ ಬೆಳೆಸಿಕೊಂಡು, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನು ಬೆಳೆಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ನಮ್ಮ ಮೊದಲ ಆದ್ಯತೆ ಆಗಬೇಕು ಎಂದು ಪ್ರವೀಣ್ ಎಸ್ ಪಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಎಸ್‌ಐ ವೆಂಕಟೇಶ್ ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
