ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಿದ ಗ್ರಾಪಂ ಮಾಜಿ ಅಧ್ಯಕ್ಷ ಎಲ್. ವೆಂಕಟೇಶ್; ಶಾಸಕ ಬೇಳೂರು ಸಮ್ಮುಖದಲ್ಲಿ ಸೇರ್ಪಡೆ
ರಿಪ್ಪನ್‌ಪೇಟೆ: ಪಟ್ಟಣದ ಹಿರಿಯ ರಾಜಕೀಯ ಮುಖಂಡ ಹಾಗೂ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಎಲ್. ವೆಂಕಟೇಶ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ರಿಪ್ಪನ್‌ಪೇಟೆಯ ಎಸ್.ಆರ್. ಕನ್ವೆನ್ಷನ್ ಹಾಲ್‌ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಎಸ್‌ಐಆರ್ (SIR) ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಅವರು ಕಾಂಗ್ರೆಸ್ ಸೇರ್ಪಡೆಯಾದರು.
ಎಲ್. ವೆಂಕಟೇಶ್ ಅವರು ನಾಲ್ಕು ಬಾರಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಒಂದು ಅವಧಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸ್ಥಳೀಯ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಅವರು ಕೆಲ ವರ್ಷಗಳ ಹಿಂದೆ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ತಮ್ಮ ಮೂಲ ಪಕ್ಷವಾದ ಕಾಂಗ್ರೆಸ್‌ಗೆ ಮರಳಿರುವುದು ಸ್ಥಳೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, “ಎಲ್. ವೆಂಕಟೇಶ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದು, ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದರು. ಈಗ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ನೀಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಆಯನೂರು ಮಂಜುನಾಥ್, ಕಲಗೋಡು ರತ್ನಾಕರ್, ಬಿ.ಪಿ. ರಾಮಚಂದ್ರ, ಶ್ವೇತಾ ಬಂಡಿ, ಚಂದ್ರಮೌಳಿ, ಸುಮಾ ಸುಬ್ರಹ್ಮಣ್ಯ, ಅಮೀರ್ ಹಂಜಾ, ಲಕ್ಷಣಗೌಡ, ಈಶ್ವರಪ್ಪ ಗೌಡ, ಚಿದಂಬರಂ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಎಲ್. ವೆಂಕಟೇಶ್ ಅವರ ಕಾಂಗ್ರೆಸ್ ಸೇರ್ಪಡೆ ಹೊಸನಗರ ತಾಲ್ಲೂಕಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ಸ್ಥಳೀಯ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
































