ಹೊಸನಗರದಲ್ಲಿ ಅಗ್ನಿಶಾಮಕ ಸಪ್ತಾಹ ಆಚರಣೆ – ಅಗ್ನಿ ಸುರಕ್ಷತಾ ಜಾಗೃತಿ ಅಭಿಯಾನ
Fire and Emergency Services Department conducted a fire safety awareness campaign in Hosanagar as part of Fire Service Week, educating the public on preventive measures, LPG safety, and emergency response during fire accidents.
ಹೊಸನಗರ: ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಅಗ್ನಿ ಸುರಕ್ಷತೆ ಕುರಿತು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಹುತಾತ್ಮ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಹೊಸನಗರ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಸಾರ್ವಜನಿಕರನ್ನು ಒಗ್ಗೂಡಿಸಿ, ಅಗ್ನಿ ಅವಘಡಗಳ ಸಂದರ್ಭದಲ್ಲಿನ ಮುಂಜಾಗ್ರತಾ ಕ್ರಮಗಳು ಹಾಗೂ ಸುರಕ್ಷತಾ ವಿಧಾನಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 2016ನೇ ಸಾಲಿನ ಧ್ಯೇಯ ವಾಕ್ಯವಾದ ‘ಅಗ್ನಿ ದುರ್ಘಟನೆ ತಡೆಯೋಣ, ರಾಷ್ಟ್ರದ ಪ್ರಗತಿ ಹೆಚ್ಚಿಸೋಣ’ ಎಂಬ ಸಂದೇಶದಡಿ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೊಸನಗರ ಅಗ್ನಿಶಾಮಕ ಠಾಣಾಧಿಕಾರಿ ಆನಂದಪ್ಪ ಅವರು ಎಲ್‌ಪಿಜಿ ಸಿಲಿಂಡರ್‌ಗಳ ಸುರಕ್ಷಿತ ಬಳಕೆ, ಅಗ್ನಿ ನಂದಕಗಳ ವಿಧಗಳು ಹಾಗೂ ಅವುಗಳನ್ನು ಸರಿಯಾಗಿ ಉಪಯೋಗಿಸುವ ವಿಧಾನಗಳ ಕುರಿತು ವಿವರಿಸಿದರು. ಅಲ್ಲದೆ ಪಟ್ಟಣದ ಹೋಟೆಲ್‌ಗಳು, ಅಂಗಡಿಗಳು ಮತ್ತು ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
ಅಗ್ನಿ ಅವಘಡ ಸಂಭವಿಸಿದಾಗ ಆತಂಕಕ್ಕೆ ಒಳಗಾಗದೆ, ಶಾಂತಚಿತ್ತದಿಂದ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸುವಂತೆ ನಾಗರಿಕರಿಗೆ ಸಲಹೆ ನೀಡಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಕೆ.ಟಿ. ರಾಜಪ್ಪ, ರಾಜೇಶ್ ಕೆ.ಹೆಚ್, ಜೆ. ರವಿ, ಸುರೇಶ್ ಗೌಡ ಸಿ. ಪಾಟೀಲ್, ನರೇಶ್ ಎಸ್. ಕಾರ್ವಿ, ಪ್ರವೀಣ್ ಕುಮಾರ್ ಬಿ, ರವೀಂದ್ರ ಕೆ, ಶಿವರಾಜ್, ಮಂಜುನಾಥ್ ಬಿ, ಆಂಜನೇಯ ಬಿ.ಸಿ, ಅಸ್ಪಕ್ ಬಿ, ಮಧು ಎಚ್ ಹಾಗೂ ಶಿಕ್ಷಕರಾದ ಮಂಜುನಾಥ್ ಉಪಸ್ಥಿತರಿದ್ದರು.
