A doctor was arrested in Shivamogga for killing his elderly uncle and aunt using a lethal injection to steal gold and clear gambling debts.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಭೂತನಗುಡಿಯಲ್ಲಿ ಮಲಗಿದ್ದಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದ ವೃದ್ಧ ದಂಪತಿಯ ಪ್ರಕರಣವನ್ನು ಭದ್ರಾವತಿ ಹಳೇನಗರ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಪ್ರಮುಖ ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ.
ಮೃತ ದಂಪತಿಯ ತಮ್ಮನ ಪುತ್ರನಾದ ಡಾ.ಮಲ್ಲೇಶ್‌ನೇ ಈ ಭೀಕರ ಕೊಲೆಯ ಪ್ರಮುಖ ಆರೋಪಿ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಜ.19ರಂದು ಭೂತನಗುಡಿಯ ಚಂದ್ರಪ್ಪ ಹಾಗೂ ಜಯಮ್ಮ ತಮ್ಮ ಮನೆಯಲ್ಲಿ ಪ್ರತ್ಯೇಕ ಮಂಚಗಳ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದರು. ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದ್ದರೂ, ದಂಪತಿಯ ಮೈಮೇಲಿನ ಚಿನ್ನಾಭರಣಗಳು ಹಾಗೂ ಮನೆಯಲ್ಲಿದ್ದ ಒಡವೆಗಳು ಕಾಣೆಯಾಗಿದ್ದರಿಂದ ಅನುಮಾನ ಗಟ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಫೋನ್ ಸ್ವೀಕರಿಸದ ಹಿನ್ನೆಲೆ ಬಹಿರಂಗವಾದ ರಹಸ್ಯ
ಮೃತ ದಂಪತಿ ತಮ್ಮ ಮೂವರು ಗಂಡು ಮಕ್ಕಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೆ ಮಕ್ಕಳು ಪ್ರತಿದಿನವೂ ತಂದೆ–ತಾಯಿಯ ಆರೋಗ್ಯ ವಿಚಾರಿಸುತ್ತಿದ್ದರು. ಜ.19ರಂದು ಯಾರೂ ಫೋನ್ ಸ್ವೀಕರಿಸದ ಹಿನ್ನೆಲೆ ನೆರೆಮನೆಯವರಿಗೆ ಮಾಹಿತಿ ನೀಡಲಾಗಿತ್ತು. ಮನೆಗೆ ಹೋಗಿ ನೋಡಿದಾಗ ಬಾಗಿಲು ತೆರೆದಿದ್ದು, ದಂಪತಿ ಮಲಗಿದ ಸ್ಥಿತಿಯಲ್ಲೇ ಇದ್ದರು. ಚಂದ್ರಪ್ಪ ಅವರ ಬಾಯಿಂದ ನೊರೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಮಕ್ಕಳಿಗೆ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಇಬ್ಬರೂ ಮೃತಪಟ್ಟಿದ್ದರು.
ಸಾಲದ ಬಲೆ, ಜೂಜಿನ ವ್ಯಸನ – ಕೊಲೆಗೆ ಕಾರಣ
ಪೊಲೀಸ್ ತನಿಖೆಯಲ್ಲಿ ಆರೋಪಿ ಡಾ.ಮಲ್ಲೇಶ್ ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದವನೆಂದು ತಿಳಿದುಬಂದಿದೆ. ಜೂಜಾಟದಲ್ಲಿ ಭಾರೀ ಹಣ ಕಳೆದುಕೊಂಡಿದ್ದ ಅವನು, ಸಾಲಗಾರರ ಒತ್ತಡಕ್ಕೆ ಸಿಲುಕಿದ್ದ. ಈ ಹಿನ್ನೆಲೆಯಲ್ಲಿ ತನ್ನ ದೊಡ್ಡಪ್ಪ ಚಂದ್ರಪ್ಪ ಅವರ ಬಳಿ 15 ಲಕ್ಷ ರೂ. ಸಾಲ ಕೇಳಿದ್ದ. ಹಣ ಇಲ್ಲವೆಂದು ನಿರಾಕರಿಸಿದ ಕಾರಣ ಕೊಲೆ ಮಾಡುವ ದುರುದ್ದೇಶ ರೂಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆಯ ನೆಪದಲ್ಲಿ ಪ್ರಾಣಘಾತಕ ಇಂಜೆಕ್ಷನ್
ಜ.19ರಂದು ಮಧ್ಯಾಹ್ನ ದೊಡ್ಡಪ್ಪ–ದೊಡ್ಡಮ್ಮ ಮನೆಗೆ ಬಂದ ಆರೋಪಿ, ಹಳೆಯ ವೈದ್ಯಕೀಯ ವರದಿಗಳನ್ನು ಪಡೆದು ಚಿಕಿತ್ಸೆ ನೀಡುವ ನೆಪದಲ್ಲಿ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ವೇಳೆ ನೀಡುವ ಇಂಜೆಕ್ಷನ್ ಅನ್ನು ದಂಪತಿಗೆ ನೀಡಿದ್ದಾನೆ. ಸಾಮಾನ್ಯವಾಗಿ 5 ಮಿಲಿಗ್ರಾಂ ಮಾತ್ರ ನೀಡಬೇಕಾದ ಇಂಜೆಕ್ಷನ್ ಅನ್ನು ತಲಾ 50 ಮಿಲಿಗ್ರಾಂ ನೀಡಿದ್ದರಿಂದ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇಬ್ಬರನ್ನು ಮಂಚದ ಮೇಲೆ ಮಲಗಿಸಿ, ಜಯಮ್ಮ ಅವರ ಮೈಮೇಲಿದ್ದ ಮಾಂಗಲ್ಯ ಸರ, ಕೈಬಳೆ, ಚಂದ್ರಪ್ಪ ಅವರ ಕೊರಳಿನ ಸರ ಹಾಗೂ ಮನೆಯಲ್ಲಿದ್ದ ಇತರೆ ಚಿನ್ನಾಭರಣಗಳನ್ನು ಕದ್ದುಕೊಂಡು ಆರೋಪಿ ಪರಾರಿಯಾಗಿದ್ದ. ಕದ್ದ ಚಿನ್ನವನ್ನು ಗಿರವಿಟ್ಟು ಸಾಲ ತೀರಿಸಿ, ಸ್ವಲ್ಪ ಹಣವನ್ನು ತನ್ನ ಖಾತೆಯಲ್ಲಿ ಉಳಿಸಿಕೊಂಡಿದ್ದಾನೆ ಎನ್ನಲಾಗಿದೆ.
ಶವ ನೋಡಲು ಬರದೇ ಇದ್ದುದೇ ಅನುಮಾನಕ್ಕೆ ಕಾರಣ
ತಂದೆ–ತಾಯಿ ಮೃತಪಟ್ಟ ಸುದ್ದಿ ತಿಳಿದರೂ ಡಾ.ಮಲ್ಲೇಶ್ ಶವ ನೋಡಲು ಬಾರದಿರುವುದು ಅನುಮಾನ ಮೂಡಿಸಿತ್ತು ಎಂದು ಮೃತರ ಪುತ್ರ ವಿಶ್ವನಾಥ್ ಹೇಳಿದ್ದಾರೆ. ತಂದೆ–ತಾಯಿಯ ಕೈಗಳಲ್ಲಿ ಇಂಜೆಕ್ಷನ್ ಗುರುತುಗಳು ಕಂಡುಬಂದಿದ್ದಲ್ಲದೆ, ಸುಮಾರು ಅರ್ಧ ಕೆಜಿ ಚಿನ್ನ ಕಳವಾಗಿರುವುದನ್ನು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಎಸ್‌ಪಿ ನಿಖಿಲ್ ಶ್ಲಾಘನೆ
ಪ್ರಕರಣದ ಕುರಿತು ಮಾತನಾಡಿದ ಎಸ್‌ಪಿ ನಿಖಿಲ್, ಯಾವುದೇ ಬಾಗಿಲು ಒಡೆದು ಕಳ್ಳತನದ ಕುರುಹುಗಳಿಲ್ಲದಿದ್ದರೂ, ತಾಂತ್ರಿಕ ಹಾಗೂ ವೈಜ್ಞಾನಿಕ ತನಿಖೆ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಕೇವಲ 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಭದ್ರಾವತಿ ಹಳೇನಗರ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಅಭಿನಂದನೆ ಸಲ್ಲಿಸಿದ ಅವರು, ತನಿಖಾ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.
ಸದ್ಯ ಆರೋಪಿ ಡಾ.ಮಲ್ಲೇಶ್ ಬಂಧನದಲ್ಲಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.
Shivamogga double murder
Doctor murder case Karnataka
Bhadravathi elderly couple murder
Injection murder case India
Propofol injection murder
Crime news Shivamogga
Doctor arrested for murder
Karnataka shocking crime
Bhadravathi crime news
Elderly couple killed by doctor














